ರಾಯಚೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ ಸಿಎಂ ಪತ್ನಿ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಪ್ರಯತ್ನ ನಡೆದಿದೆ.
ಇದಕ್ಕೆ ಬೇಸರಗೊಂಡು ನ್ಯಾಯಬದ್ಧವಾಗಿ ಪಡೆದಿರುವ ಸೈಟ್ಗಳನ್ನು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಾರೆ. ಪಾರ್ವತಿಯವರ ನಿರ್ಧಾರ ಉತ್ತಮವಾಗಿದೆ. ನಾವು ಅಭಿನಂದಿಸುತ್ತೇವೆ ಎಂದರು.
ಬಿಜೆಪಿಯವರಿಗೆ ನ್ಯಾಯ, ಅಭಿವೃದ್ಧಿ ಬೇಕಿಲ್ಲ. ಕೇವಲ ಕುತಂತ್ರ ರಾಜಕೀಯ ಮಾತ್ರ ಬೇಕು. ನ್ಯಾಯ ಅನ್ಯಾಯದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಮಾಡಬೇಕು ಎಂದು ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ವಾಚ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿರುವ ವಿಚಾರದ ಕುರಿತು ಮಾತನಾಡಿ ವಿದೇಶದಲ್ಲಿದ್ದ ಸ್ನೇಹಿತರು ಬಂದು ವಾಚ್ ಕೊಟ್ಟಿದ್ದರು. ಅದರ ಬಗ್ಗೆ ಟೀಕೆ ಟಿಪ್ಪಣಿಗಳು ಬಂದ ಕೂಡಲೇ ತಕ್ಷಣ ಸರೆಂಡರ್ ಮಾಡಿದ್ದಾರೆ.
ಜವಾಬ್ದಾರಿಯುತ ಜನಪ್ರತಿನಿಧಿ ಮಾಡಬೇಕಾದ ಕೆಲಸ ಮಾಡಿದ್ದಾರೆ. ಅದು ತಪ್ಪಾ? ಕುಮಾರಸ್ವಾಮಿ ಅವರ ಕುಟುಂಬ ಮಾಡಿದ ಹಾಗೆ ಕಳ್ಳತನ ಮಾಡಬೇಕಿತ್ತಾ? ಅವರು ಯಾವ ರೀತಿ ಲೂಟಿ ಮಾಡಿ ಸಾವಿರಾರು ಕೋಟಿ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿಲ್ವಾ? ಇದನ್ನೆಲ್ಲಾ ಮಾಡಿರುವವರ ಮಾತುಗಳಿಗೆ ದೇಶ ಹಾಗೂ ರಾಜ್ಯದ ಜನರು ಹೆಚ್ಚು ಗಮನ ಕೊಡುವ ಅವಶ್ಯಕತೆಯಿಲ್ಲ ಎಂದ ಹೇಳಿದರು.