ಬೆಂಗಳೂರು: ಮುಸ್ಲಿಂ ವ್ಯಕ್ತಿ ಬಿಜೆಪಿಯಿಂದ ಗೆಲ್ಲುವ ವಿಶ್ವಾಸ ಬಂದಾಗ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ(BS Yeddyurappa) ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮುಸ್ಲಿಂ ಸಮುದಾಯದ ಬಗ್ಗೆ ವಿಶ್ವಾಸ ಇದೆ. ಅವರ ಸಹಕಾರ ಬೆಂಬಲ ನಮಗೆ ಬೇಕು. ಆದರೆ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇನ್ನೂ ನಮಗೆ ಬಂದಿಲ್ಲ. ಆ ವಿಶ್ವಾಸ ಬಂದಾಗ ಖಂಡಿತ ಮುಸ್ಲಿಂ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದರು.
ಹಿಂದೂ ಹಬ್ಬಕ್ಕೆ ಮಾತ್ರ ಉಚಿತ ಸಿಲಿಂಡರ್ ಭರವಸೆ ನೀಡಲಾಗಿದೆ ಎಂದ ಮಾತ್ರಕ್ಕೆ ಮುಸ್ಲಿಂರ ವಿರುದ್ಧ ಇದ್ದೇವೆ ಎಂದಲ್ಲ. ಹಿಂದೂ ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಸಂವಿಧಾನದ ಆಶಯದಲ್ಲಿರುವಂತೆ ಉಚಿತ ಸಿಲಿಂಡರ್ ಕೊಡುತ್ತಿದ್ದೇವೆ. ಇದರಲ್ಲಿ ಧರ್ಮ ಜಾತಿ ಇಲ್ಲ. ಎಲ್ಲರಿಗೂ ಸಿಲಿಂಡರ್ ಸಿಗಲಿದೆ. ನಾನು ತಂದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಶೇ. 60 ರಷ್ಟು ಫಲಾನುಭವಿಗಳು ಮುಸ್ಲಿಂರು.ನಾವು ಜಾತಿ, ಧರ್ಮ ನೋಡದೆ ಕೇವಲ ಅಭಿವೃದ್ಧಿ ಮಾತ್ರ ನೋಡುತ್ತೇವೆ ಎಂದು ಸಮರ್ಥಿಸಿಕೊಂಡರು. ನಮಗೆ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಲು ಇನ್ನು ಸಮಯ ಬಂದಿಲ್ಲ. ನಾವು ಆ ಸಮುದಾಯವನ್ನು ನಂಬುತ್ತೇವೆ. ಆದರೆ ಆ ಸಮುದಾಯದ ಅಭ್ಯರ್ಥಿ ನಮ್ಮ ಪಕ್ಷದಿಂದ ಗೆಲ್ಲಲಿದ್ದಾರೆ ಎನ್ನುವ ನಂಬಿಕೆ ನಮಗೆ ಇನ್ನೂ ಬಂದಿಲ್ಲ. ಬಂದಾಗ ಟಿಕೆಟ್ ಕೊಡುತ್ತೇವೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಮುಸ್ಲಿಂ ವ್ಯಕ್ತಿಗೆ ಪರಿಷತ್ ಸ್ಥಾನ ನೀಡಿ ಮಂತ್ರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.