ಬೆಂಗಳೂರು ;– ಬಿಬಿಎಂಪಿ ಚುನಾವಣೆ ಜೊತೆಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಕೈಗೆ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಜತೆಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಮಾಡುತ್ತೇವೆ. ಕೋರ್ಟ್ ನಿರ್ದೇಶನ ಪಾಲಿಸುವ ಜತೆಗೆ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು.
ಎಲ್ಲದಕ್ಕೂ ರೀತಿ-ನೀತಿ ಎಂಬುದು ಇರುತ್ತದೆ. ಆದರೆ ಬಿಬಿಎಂಪಿ ಚುನಾವಣೆ ಮಾಡುವುದು ಖಚಿತ ಎಂದು ಹೇಳಿದರು. ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಸಹ ಹಿಂದಿನ ಸರ್ಕಾರ ತಡೆ ಹಿಡಿದಿತ್ತು. ನಾವು ಕೊಟ್ಟ ಮಾತಿನಂತೆ ಈ ಎರಡೂ ಚುನಾವಣೆಯನ್ನೂ ಮಾಡುತ್ತೇವೆ ಎಂದರು..
ನಿಗಮ-ಮಂಡಳಿ ನೇಮಕಕ್ಕೂ ಕ್ರಮ ಕೈಗೊಳ್ಳುತ್ತೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಇರುತ್ತದೆ. ಶಾಸಕರು ಹಾಗೂ ಅಧ್ಯಕ್ಷರಿಗೆ ಹೆಸರುಗಳನ್ನು ಶಿಫಾರಸು ಮಾಡಲು ಸೂಚಿಸಿದ್ದೇವೆ. ಅವರು ಶಿಫಾರಸು ಮಾಡಿದ ಬಳಿಕ ಪರಿಶೀಲಿಸಿ ನಿಗದಿತ ಸಮಯದಲ್ಲಿ ನೇಮಕ ಮಾಡುತ್ತೇವೆ ಎಂದು ಮಾಹಿತಿ ನೀಡಿದರು