ವಾಷಿಂಗ್ಟನ್: ಭಾರತದೊಂದಿಗೆ ಮಹತ್ವದ ರಕ್ಷಣಾ ಪಾಲುದಾರಿಕೆಯನ್ನು ಅಮೆರಿಕ ಹೊಂದಿದ್ದು, ಕ್ವಾಡ್ ಬಳಗದಲ್ಲಿ ಅಗಾದ ಸಹಕಾರ ಹೊಂದಿದೆ ಎಂದು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡುತ್ತಿದ್ದು, ನಾವು ತುಂಬಾ ಉತ್ಸುಕದಿಂದ ಎದುರು ನೋಡುತ್ತಿದ್ದೇವೆ. ನಿಮಗೆ ತಿಳಿದಿರುವಂತೆ ಭಾರತದೊಂದಿಗೆ ಮಹತ್ವದ ರಕ್ಷಣಾ ಪಾಲುದಾರಿಕೆಯನ್ನು ಹೊಂದಿದ್ದೇವೆ ಮತ್ತು ಕ್ವಾಡ್ ಒಳಗೆ, ಇಂಡೋ-ಪೆಸಿಫಿಕ್ನಾದ್ಯಂತ ಅದ್ಭುತ ಸಹಕಾರವನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಕ್ವಾಡ್ನಲ್ಲಿ ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕ ಇದ್ದು ಇಂಡೋ-ಪೆಸಿಫಿಕ್ನಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಎದುರಿಸಲು ಚತುರ್ಭುಜ ಒಕ್ಕೂಟ ಅಥವಾ ಕ್ವಾಡ್ ಅನ್ನು ಸ್ಥಾಪಿಸುವ ದೀರ್ಘಾವಧಿಯ ಪ್ರಸ್ತಾಪಕ್ಕೆ ನಾಲ್ಕು ದೇಶಗಳು 2017 ರಲ್ಲಿ ರೂಪು ನೀಡಿವೆ.
ಮೋದಿಯವರನ್ನು ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಆಹ್ವಾನಿಸಿದ್ದಾರೆ, ಇದು ಜೂನ್ 22 ರಂದು ಗೌರವಾರ್ಥ ಭೋಜನ ಕೂಟವೂ ಆಯೋಜಿಸಲಾಗಿದೆ.