ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ್ಕೊಂಡು ಪೇಜರ್ ಗಳು ತೈವಾನ್ ನಿಂದ ಬಂದಿದ್ದು. ಅವುಗಳನ್ನು ನಾವು ತಯಾರಿಸಿಲ್ಲ ಎಂದು ಗೋಲ್ಡ್ ಅಪೋಲೋ ಸಂಸ್ಥೆ ಹೇಳಿಕೊಂಡಿದೆ.
ಲೆಬನಾನ್ ನಲ್ಲಿ ಹೆಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಗಳು ಏಕಾಏಕಿ ಬ್ಲಾಸ್ಟ್ ಆಗಿ ಕನಿಷ್ಠ 11 ಮಂದಿ ಸಾವಿಗೀಡಾಗಿ 2,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಮುಂದುವರೆದಿದೆ.
ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.
ಏತನ್ಮಧ್ಯೆ ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಪೇಜರ್ ಗಳನ್ನು ತೈವಾನ್ ನಿಂದ ತರಲಾಗಿತ್ತು. ಮತ್ತು ಹೀಗೆ ಪೇಜರ್ ಗಳು ಲೆಬೆನಾನ್ ಸೇರುವ ಮುನ್ನವೇ ಅದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರದಿಯಲ್ಲಿರುವಂತೆ ಈ ಎಲ್ಲ ಪೇಜರ್ ಗಳನ್ನು ತೈವಾನ್ ಮೂಲದ ಗೋಲ್ಡ್ ಅಪೋಲೋ ಸಂಸ್ಥೆಯಿಂದ ತರಿಸಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.
ಈ ಹೀಗೆ ರವಾನೆ ಮಾಡಿದ ಪೇಜರ್ ಗಳನ್ನು ರಫ್ತಿಗೂ ಮೊದಲೇ ಇಸ್ರೇಲಿ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದರು. ಹೆಸರು ಹೇಳಲಿಚ್ಚಿಸದ ಹೆಜ್ಬುಲ್ಲಾ ಸದಸ್ಯರೊಬ್ಬರು ಹೇಳಿರುವಂತೆ ಇತ್ತೀಚೆಗೆ ಸುಮಾರು 1 ಸಾವಿರಕ್ಕೂ ಅಧಿಕ ಪೇಜರ್ ಗಳನ್ನು ಆರ್ಡರ್ ಮಾಡಿ ಆಮದು ಮಾಡಿಕೊಳ್ಳಲಾಗಿತ್ತು. ಇದಲ್ಲದೆ ಇನ್ನೂ ಮೂರು ಸಾವಿರ AR924 model ಪೇಜರ್ ಗಳ ಖರೀದಿಗೆ ಆರ್ಡರ್ ಮಾಡಲಾಗಿದೆ. ಪ್ರಸ್ತುತ ಸ್ಫೋಟಗೊಂಡಿರುವ ಪೇಜರ್ ಗಳೂ ಇವೇ ಆಗಿವೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಹಾಲಿ ಸ್ಫೋಟಗೊಂಡಿರುವ ಪೇಜರ್ ಗಳು ತನ್ನ ಸಂಸ್ಥೆಯದ್ದಲ್ಲ ಎಂದು ಗೋಲ್ಡ್ ಅಪೊಲೊ ಸಂಸ್ಥೆ ಹೇಳಿಕೊಂಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ ಸ್ಫೋಟದಲ್ಲಿ ಬಳಸಿದ ಪೇಜರ್ಗಳನ್ನು ಗೋಲ್ಡ್ ಅಪೊಲೊ ಸಂಸ್ಥೆ ತಯಾರಿಸಿಲ್ಲ. ತೈವಾನ್ ಸಂಸ್ಥೆಯ ಬ್ರ್ಯಾಂಡ್ ಅನ್ನು ಬಳಸುವ ಹಕ್ಕನ್ನು ಹೊಂದಿರುವ ಯುರೋಪಿನ ಕಂಪನಿಯಿಂದ ಅವುಗಳನ್ನು ತಯಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.