ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ BPL ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ನಾವು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ತಿಂಗಳಿಗೆ 30 ಕೆಜಿ ಅಕ್ಕಿ ನೀಡುವ ತೀರ್ಮಾನ ಕೈಗೊಂಡಿದ್ದೆವು. ನಂತರ ತಲಾ 7 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದೆವು. ಮೊದಲು ಜನರಿಂದ 2 ರೂ. ಹಾಗೂ ಸರ್ಕಾರದಿಂದ ಮೂರು ರೂ. ಹಾಕಿ 5 ರೂ ಗೆ ಒಂದು ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದೆವು.
ನಂತರ ಇದನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ ರೂಪದಲ್ಲಿ ಉಚಿತವಾಗಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿದೆವು. ಇದೀಗ ಸರ್ಕಾರದ ಐದು ಕೆಜಿಗೆ ಇಳಿಸಿದೆ. ನಾವು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜನ ನೀವು ಅಧಿಕಾರಕ್ಕೆ ಬಂದಾಗ ಇದನ್ನ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾವು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದೇವೆ. ಹಸಿದವರಿಗೆ ಹೊಟ್ಟೆ ತುಂಬ ಊಟ ನೀಡಬೇಕೆಂಬ ತೀರ್ಮಾನ ಕೈಗೊಂಡು ಈ ನಿರ್ಧಾರ ಮಾಡಿದ್ದೇವೆ’ ಎಂದು ತಿಳಿಸಿದರು.