ಬೆಂಗಳೂರು: ರಾಜ್ಯ ಸರಕಾರ ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಇದನ್ನು ಸಹಿಸಲಾಗದ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದ್ದು, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರದಿಂದ ಅನುಮತಿ ಕೊಡಿಸಲಿ, ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಸೂಚನೆ ಇಲ್ಲದಿದ್ದರೂ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿ, ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಪೂರೈಕೆ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಕೊಳವೆ ಬಾವಿಗಳು ಬತ್ತಿರುವ ಕಡೆಗಳಲ್ಲಿ ಮಾತ್ರ ಅಭಾವ ಹೆಚ್ಚಾಗಿದೆ ಎಂದರು.
ಇನ್ನು ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಸುಳ್ಳು. ಅವರು ನೀರು ಕೇಳಿಲ್ಲ. ಅಲ್ಲದೆ, ನಮ್ಮಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ? ಬಿಜೆಪಿಯದು ಕೇವಲ ರಾಜಕೀಯ ಗಿಮಿಕ್,” ಎಂದು ಟೀಕಿಸಿದರು. ”ರಾಜ್ಯ ಸರಕಾರದ ಯಶಸ್ಸು ಸಹಿಸದೆ ಪ್ರತಿಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿತಮಿಳುನಾಡಿಗೂ ಕಾವೇರಿ ನೀರಿಗೂ ಏನು ಸಂಬಂಧ?
ತಮಿಳುನಾಡಿನವರು ನೀರು ಬಿಡಿ ಎಂದು ಕೇಳಿದ್ದಾರಾ? ಕೇಳದಿದ್ದರೂ ನೀರು ಬಿಡಲು ನಮಗೆ ತಲೆ ಕೆಟ್ಟಿದೆಯಾ? ಬೆಂಗಳೂರಿಗೆ ಕುಡಿಯಲು ನೀರನ್ನು ಸಮರ್ಪಕವಾಗಿ ಪೂರೈಸಲು ನೀರು ಹರಿಸಲಾಗಿದೆ. ರಾಜ್ಯ ಸರಕಾರ ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿದೆ ಎಂಬ ಅಸೂಯೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ,” ಎಂದು ಹರಿಹಾಯ್ದರು.