ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ 3ನೇ ಕ್ರಮಾಂಕದಲ್ಲಿ ಆಡಲು ಇದ್ದ ಕಾರಣವನ್ನು ಎಲ್ ಎಸ್ ಜಿ ನಾಯಕ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮಾರ್ಕಸ್ ಸ್ಟೋಯ್ನಿಸ್ ಬಹುತೇಕ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು.
ಆದರೆ ಸಿಎಸ್ ಕೆ ನೀಡಿದ 211 ರನ್ ಗಳ ಕಠಿಣ ಗುರಿ ಚೇಸ್ ಮಾಡಿದ ಎಲ್ ಎಸ್ ಜಿ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಸ್ಟೋಯ್ನಿಸ್ ಅಜೇಯ 124 ರನ್ ಗಳಿಸಿ 19.3 ಓವರ್ ಗಳಲ್ಲೇ ತಂಡಕ್ಕೆ 6 ವಿಕೆಟ್ ಗಳ ಜಯದ ಮಾಲೆ ತೊಡಿಸಿದರು.
ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಾರ್ಕಸ್ ಸ್ಟೋಯ್ನಿಸ್ 13 ಬೌಂಡರಿ ಹಾಗೂ 6 ಸಿಕ್ಸರ್ ಗಳ ಸಹಿತಿ 63 ಎಸೆತಗಳಲ್ಲೇ 124* ರನ್ ಗಳಿಸಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ಗೆಲುವು ತಂದುಕೊಟ್ಟ ಸ್ಟೋಯ್ನಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಐಪಿಎಲ್ ಟೂರ್ನಿಯಲ್ಲಿ ಎಲ್ ಎಸ್ ಜಿ ಪರ ಶತಕ ಸಿಡಿಸಿದ 3ನೇ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
ಪಂದ್ಯ ಮುಗಿದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ಮಾರ್ಕಸ್ ಸ್ಟೋಯ್ನಿಸ್ ಅವರನ್ನು 3ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿಸಲು ಇದ್ದ ಕಾರಣವನ್ನು ಎಲ್ ಎಸ್ ಜಿ ನಾಯಕ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ. “ನಾವು ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಪವರ್ ಪ್ಲೇಅನ್ನು ಸದ್ಬಳಕೆ ಮಾಡಿಕೊಳ್ಳಲು ಬಯಸಿದ್ದೆವು. ಅಲ್ಲದೆ ಅಗ್ರ 3 ಕ್ರಮಾಂಕದಲ್ಲಿ ಒಬ್ಬ ಪವರ್ ಹಿಟ್ಟರ್ ಅನ್ನು ಅಖಾಡಕ್ಕಿಳಿಸಲು ಚಿಂತಿಸಿದ್ದೆವು.
ಕಳೆದ ಕೆಲವು ವರ್ಷಗಳಿಂದ ಟಿ20 ಮಾದರಿ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂಬುದನ್ನು ನಾನು ಚೆನ್ನಾಗಿ ಅರಿತುಕೊಂಡಿದ್ದೇನೆ. 170-180 ರನ್ ಗಳು ಈಗ ಗೆಲುವಿನ ಮೊತ್ತವಾಗಿ ಉಳಿದಿಲ್ಲ. ಆದ್ದರಿಂದ ನಾವು ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ರನ್ ಗಳಿಸಬೇಕು ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಆಳವಾದ ಬ್ಯಾಟಿಂಗ್ ನಡೆಸುವ ಅನುಕೂಲ ಪಡೆದಿದ್ದೇವೆ,” ಎಂದು ಎಲ್ ಎಸ್ ಜಿ ನಾಯಕ ಹೇಳಿದ್ದಾರೆ. “ನಾವು ಪಂದ್ಯಗಳನ್ನು ಗೆಲ್ಲಲು ಯಾವುದೇ ಸೀಮಿತ ರಣತಂತ್ರ ರೂಪಿಸಿಲ್ಲ. ತಂಡದ ಆರಂಭಿಕ ಆಟಗಾರರಂತೆ ಉಳಿದ ಬ್ಯಾಟರ್ಸ್ ಗಳು ಕೂಡ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ತಮ್ಮನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದ ತಂಡವು ಸಮತೋಲನದಿಂದ ಕೂಡಿದೆ,” ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.