ಬೆಂಗಳೂರು:- ನಗರವನ್ನು ಮಾಲಿನ್ಯ ಮುಕ್ತವಾಗಿರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನೃಪತುಂಗ ರಸ್ತೆಯ ಯವನಿಕ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಿ ಮುಂದಿನ ಯುವ ಪೀಳಿಗೆಗೆ ಉತ್ತಮ ವಾತವರಣ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಹೆಚ್ಚುತ್ತಿದೆ. ನಗರೀಕರಣ, ಹೆಚ್ಚುತ್ತಿರುವ ವಾಹನಗಳು, ಜನಸಂಖ್ಯೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ.
ನಾವು ಆದಷ್ಟು ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು. ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ರಸ್ತೆ ಸುರಕ್ಷತೆ ಕಾರ್ಯದರ್ಶಿ ಎ.ಎಂ.ಯೋಗೀಶ್, ಅಪರ ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ್, ಜೆ. ಜ್ಞಾನೇಂದ್ರ ಕುಮಾರ್, ಜೆ.ಪುರುಷೋತ್ತಮ್, ಸಿ.ಮಲ್ಲಿಕಾರ್ಜುನ್, ಜಂಟಿ ಸಾರಿಗೆ ಆಯುಕ್ತ ಎಂ.ಶೋಭ ಸೇರಿದಂತೆ ಉಪಸ್ಥಿತರಿದ್ದರು.