ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಶ್ಲಾಘಿಸಿರುವ ಅವರು ಕಷ್ಟದ ಸಮಯದಲ್ಲಿ ಭಾರತೀಯರ ಜೊತೆ ನಾವಿರುತ್ತೇವೆ ಎಂದಿದ್ದಾರೆ.
‘ಜಿಲ್ ಬೈಡನ್ ಮತ್ತು ನಾನು ಕೇರಳದಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ (ಭೂಕುಸಿತ) ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ’ ಎಂದು ಜೋ ಬೈಡನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯ ಧೈರ್ಯವನ್ನು ನಾವು ಪ್ರಶಂಸಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಭಾರತೀಯರ ಜೊತೆಯಲ್ಲಿರುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ದುರಂತದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.