ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮಾಲಿನ್ಯ ನಿಯಂತ್ರಣಕ್ಕೆ ಪ್ರಾಯೋಗಿಕ ಪರಿಹಾರಗಳೊಂದಿಗೆ ಮುಂದಿನ ವಿಚಾರಣೆಗೆ ಬರಬೇಕು. ಇಲ್ಲಿಯ ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ. ಮುಖ್ಯ ಕಾರ್ಯದರ್ಶಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಕೋರ್ಟಿಗೆ ಕರೆಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಎಚ್ಚರಿಕೆ ನೀಡಿದೆ.
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ನೀವು ಬೇಕಾದುದನ್ನು ಮಾಡಿ, ನಾವು ಏನನ್ನೂ ಹೇಳುತ್ತಿಲ್ಲ ಅಥವಾ ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ. ನೀವೂ ಏನು ಮಾಡದಿದ್ದರೆ ನಾವು ಏನಾದರೂ ಮಾಡಬೇಕಾಗುತ್ತದೆ ಎಂದು ಸರ್ಕಾರಗಳ ವಿರುದ್ಧ ಛೀಮಾರಿ ಹಾಕಿತು. ಕೃಷಿ ತಾಜ್ಯ ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಅದು ಕೂಡಲೇ ನಿಲ್ಲಬೇಕು.
ನಾವು ಮಧ್ಯಪ್ರವೇಶಿಸಿದ ನಂತರವೇ ಕೆಲಸಗಳು ಏಕೆ ನಡೆಯುತ್ತವೆ? ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಬಿಡುವುದಾಗಿ ನ್ಯಾಯಾಲಯ ಹೇಳಿದೆ. ವಿಚಾರಣೆ ವೇಳೆ ದೆಹಲಿಯಲ್ಲಿ (New Delhi) ಜಾರಿ ಮಾಡಿದ್ದ ಸಮ ಬೆಸ ಯೋಜನೆ ಯಶಸ್ವಿಯಾಗಿದೆ ಎಂದು ಸರ್ಕಾರ ಹೇಳಿದೆ. ಬೆಸ-ಸಮ ಯೋಜನೆಯು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಿದೆ. ವಾಹನಗಳ ಹೊರಸೂಸುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಸಾರಿಗೆಯ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜೊತೆಗೆ ಇಂಧನ ಬಳಕೆಯಲ್ಲಿ 15 ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.