ಬೆಂಗಳೂರು: 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಹೊತ್ತಲ್ಲೇ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಮಸೀದಿಗೆ ಹೋಗಿ ನಮಾಜ್ ಮಾಡಿದರು. ಈ ವಿಚಾರವನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕರು, ಎಲೆಕ್ಷನ್ ಗಿಮಿಕ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಿಜೆಪಿ ಕಾಲೆಳೆದಿದ್ದರು. ಇದೀಗ ನಮಾಜ಼್ ಮಾಡಿದ್ದರ ಬಗ್ಗೆ ಶಾಸಕ ಉದಯ್ ಗರುಡಾಚಾರ್ ಅವರು ತಮ್ಮ ಕಚೇರಿಯಲ್ಲಿ ಪ್ರತಿಕ್ರಿಯಿಸಿ, ಭಾರತ ದೇಶ ಒಂದು ಜ್ಯಾತ್ಯಾತೀತ ದೇಶ, ಇಲ್ಲಿ ಹಿಂದೂಗಳು, ಮುಸ್ಲಿಮರು,
ಸಿಖ್ಖರು ಎಲ್ಲಿಗೂ ಅವಕಾಶ ಇದೆ. ನಾನೊಬ್ಬ ಬ್ರಾಹ್ಮಣ, ಬೆಳಗ್ಗೆ ಸ್ನಾನ ಮುಗಿಸಿ ಸಂಧ್ಯಾವಂದನೆ ಮಾಡುತ್ತೇನೆ. ಒಮ್ಮೆ ಮನೆಯಿಂದ ಹೊರಗಡೆ ಬಂದರೆ ನನ್ನ ಕಣ್ಣಿಗೆ ಎಲ್ಲರೂ ಒಂದೇ. ಕ್ರಿಸ್ಮಸ್ ಸಮಯದಲ್ಲಿ ನಾನು ಚರ್ಚ್ ಗೆ ಹೋಗುತ್ತೇನೆ, ಶ್ರೀರಾಮನವಮಿ ಆಚರಿಸಿದ್ದೇನೆ. ಭಾರತ ಭವ್ಯ ಭಾರತ ಆಗಬೇಕು ಅಂದ್ರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ನರೇಂದ್ರ ಮೋದಿ, ಅಮಿತ್ ಶಾ, ನಮ್ಮ ಸಂಘದ ಮೋಹನ್ ಭಾಗವತ್ ಎಲ್ಲರೂ ಇದನ್ನೇ ಹೇಳಿದ್ದಾರೆ. ಹೀಗಾಗಿ ನಾನು ಜಾಮೀಯ ಮಸೀದಿಗೆ ಹೋಗಿದ್ದಕ್ಕೆ ಬೇರೆ ಅರ್ಥ ಇಲ್ಲ ಎಂದು ಶಾಸಕ ಉದಯ್ ಬಿ ಗರುಡಾಚಾರ್ ಹೇಳಿದ್ದಾರೆ.