ಕೋಲ್ಕತ್ತಾ: ಇಡೀ ದೇಶದಲ್ಲಿಯೇ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ತಿರುಗೇಟು ನೀಡಿದರು. ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಮಹಿಳಾ ವಿಂಗ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸಂದೇಶಖಾಲಿ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಿದಾಗ ಅವರು ಮೌನ ವಹಿಸುತ್ತಾರೆ ಎಂದು ಕಿಡಿಕಾರಿದರು. ಪಶ್ಚಿಮ ಬಂಗಾಳವು ಮಹಿಳೆಯರಿಗೆ ದೇಶದಲ್ಲೇ ಅತ್ಯಂತ ಸುರಕ್ಷಿತ ರಾಜ್ಯವಾಗಿದೆ. ಇಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಾರೆ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ ಮತ್ತು ಈಶಾನ್ಯ ರಾಜ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಧಾನಿ ಮೌನವಾಗಿದ್ದರು ಎಂದು ಆರೋಪಿಸಿದರು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದಾಗ ನೀವು ಎಲ್ಲಿದ್ದಿರಿ? ನೀವು ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮದೇ ಪಕ್ಷದ ಸಂಸದರು ಬಾಕ್ಸರ್ಗೆ ಕಿರುಕುಳ ನೀಡಿದರು ಕೂಡ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತೀರಾ? ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ದೀದಿ ಕೆಂಡಾಮಂಡಲರಾದರು.