ಮಾಸ್ಕೋ: ರಷ್ಯಾದೊಂದಿಗೆ ಸಂಘರ್ಷಕ್ಕೆ ಉಕ್ರೇನ್ ನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿರುವ ಅಧ್ಯಕ್ಷ ವ್ಲಾಡಿಮಿರ್ ಫುಟಿನ್, ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳನ್ನು ಮಾಸ್ಕೋ ಯಶಸ್ವಿಯಾಗಿ ತಡೆದುಕೊಂಡಿದೆ ಎಂದು ಘೋಷಿಸಿದ್ದಾರೆ.
ಉಕ್ರೇನ್ ವಿರುದ್ಧದ ವಿಶೇಷ ಸೇನಾ ಕಾರ್ಯಾಚರಣೆ ಇದೇ 24 ರಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಅವರು, ರಷ್ಯಾ ವಿರುದ್ಧ ಕಾರ್ಯತಂತ್ರದ ಜಯ ಸಾಧಿಸುವುದು ಮತ್ತು ರಷ್ಯಾವನ್ನು ಒಮ್ಮೆಗೆ ನಾಶಪಡಿಸುವುದು ಪಶ್ಚಿಮ ರಾಷ್ಟ್ರಗಳ ಗುರಿಯಾಗಿದೆ. ರಷ್ಯಾದೊಂದಿಗಿನ ಉಕ್ರೇನ್ ಸಂಘರ್ಷ, ಅನೇಕ ಜೀವಹಾನಿಗಳಿಗೆ ಹೊಣೆ ಸಂಪೂರ್ಣವಾಗಿ ಪಾಶ್ಚಿಮಾತ್ಯ ಆಯ್ದ ರಾಷ್ಟ್ರಗಳ ಮೇಲಿದೆ ಎಂದರು. ಉಕ್ರೇನ್ನಲ್ಲಿ ತನ್ನ ಎಲ್ಲಾ ಕಾರ್ಯಗಳನ್ನು ಪೂರೈಸಲು ರಷ್ಯಾ ನಿರ್ಧರಿಸಿದೆ ಎಂದು ಫುಟಿನ್ ಹೇಳಿದರು. ಕಳೆದ ಸೆಪ್ಟೆಂಬರ್ನಲ್ಲಿ ನೂರಾರು ಸಾವಿರ ಸೈನಿಕರನ್ನು ಸಜ್ಜುಗೊಳಿಸಿದ ನಂತರವೂ ಅವರ ಸೈನ್ಯವು ಕಳೆದ ವರ್ಷದಲ್ಲಿ ಅವಮಾನಕರ ಸೋಲುಗಳ ಸುದೀರ್ಘ ಸರಣಿಯನ್ನು ಎದುರಿಸಿದೆ ಎಂದರು.
ನಮ್ಮ ದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, 2014 ರ ದಂಗೆಯ ನಂತರ ಉಕ್ರೇನ್ನಲ್ಲಿ ಸೃಷ್ಟಿಯಾದ ನವ–ನಾಜಿ ಆಡಳಿತದಿಂದ ಬಂದ ಬೆದರಿಕೆಯನ್ನು ತೊಡೆದುಹಾಕಲು, ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.
ಮಾಸ್ಕೋದ ಮಿಲಿಟರಿ ಹಸ್ತಕ್ಷೇಪದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ರಷ್ಯಾದ ಆರ್ಥಿಕತೆಯು ನಿರೀಕ್ಷೆಗಿಂತ ಉತ್ತಮವಾಗಿ ಎದುರಿಸಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಅವರು ಯಶಸ್ವಿಯಾಗಲಿಲ್ಲ ಮತ್ತು ಯಶಸ್ವಿಯಾಗುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ.