ನವದೆಹಲಿ: ಇಲ್ಲಿನ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು (Wrestlers) ಮೇ 21ರ ಒಳಗೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರೂ ಆಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ನನ್ನ (Brij Bhushan Sharan Singh) ಬಂಧಿಸುವಂತೆ ಗಡುವು ನೀಡಿದ್ದಾರೆ.
ವಿನೇಶ್ ಫೋಗಟ್ (Vinesh Phogat), ಬಜರಂಗ್ ಪೂನಿಯಾ (Bajrang Punia) ಹಾಗೂ ಸಾಕ್ಷಿ ಮಲಿಕ್ ಸೇರಿ 31 ಸದಸ್ಯರನ್ನೊಳಗೊಂಡ ಕುಸ್ತಿಪಟುಗಳ ಸಮಿತಿ ಮೇ 21ರ ಒಳಗೆ ಬಂಧಿಸದಿದ್ದರೆ ಮಹತ್ವದ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಭಾರತೀಯ ಕಿಸಾನ್ ಯೂನಿಯನ್ (BKU) ವಕ್ತಾರ ರಾಕೇಶ್ ಟಿಕಾಯತ್ (Rakesh Tikait), ಖಾಪ್ ಮಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಕ್ಯುತ್ ಕಿಸ್ನಾ ಮೋರ್ಚಾದ (ರಾಜಕೀಯೇತರ) ಬಲದೇವ್ ಸಿಂಗ್ ಸಿರ್ಸಾ ಅವರೂ ಸಹ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ CRPC ಸೆಕ್ಷನ್ 161 ಹಾಗೂ 164 ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಆದ್ರೆ ಈವರೆಗೆ ಬಂಧಿಸುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮೇ 21ರ ಒಳಗೆ ಬ್ರಿಜ್ ಭೂಷಣ್ನನ್ನ ಬಂಧಿಸದಿದ್ದರೆ ಪ್ರತಿಭಟನೆ ಇನ್ನೂ ದೊಡ್ಡದಾಗಲಿದೆ ಎಂದು ವಿನೇಶ್ ಫೋಗಟ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಕೇಶ್ ಟಿಕಾಯತ್, ಇದು ರಾಜಕೀಯ ಪ್ರತಿಭಟನೆಯಲ್ಲ. ಆದ್ರೆ ಕೆಲವು ರಾಜಕಾರಣಿಗಳೂ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ರೈತರು ಹೋರಾಟ ಮಾಡಿದಂತೆ ಕುಸ್ತಿಪಟುಗಳೂ ತಮ್ಮ ಹೋರಾಟ ಮುಂದುವರಿಸಲಿದ್ದಾರೆ. ಸರ್ಕಾರ ತಾಳ್ಮೆ ಪರೀಕ್ಷಿಸಬಾರದು ಎಂದೂ ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ಕುಡಿದ ಅಮಲಿನಲ್ಲಿದ್ದ ಪೊಲೀಸರು ಬುಧವಾರ ರಾತ್ರಿ ಹಲ್ಲೆ ನಡೆಸಿರುವುದಾಗಿ ಕುಸ್ತಿಪಟುಗಳು ಆರೋಪಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳನ್ನು ತರಲು ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿರುವುದಾಗಿ ದೂರಿದ್ದರು. ಕೆಲವು ಕುಸ್ತಿಪಟುಗಳ ತಲೆಗೆ ಹೊಡೆತ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ. ಒಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆ ಬಳಿಕ ನೋವನುಭವಿಸಿದ ಕುಸ್ತಿಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಹೇಳಿದ್ದರು