ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ಕಿತ್ತಾಟ ಶುರುವಾಗಿದೆ. ಭಾರೀ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್ ಪಕ್ಷದಲ್ಲೀಗ ಸಿಎಂ ಹುದ್ದೆಗಾಗಿ ಜಟಾಪಟಿ ತಾರಕಕ್ಕೇರಿದೆ. ಮುಖ್ಯಮಂತ್ರಿ ಹುದ್ದೆ ತಮಗೇ ಬೇಕು ಎಂದು ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಪಟ್ಟು ಹಿಡಿದು ಕುಳಿತಿದ್ದಾರೆ. ಇಬ್ಬರೂ ನಾಯಕರೂ ತಮ್ಮದೇ ಆದ ರೀತಿಯಲ್ಲಿ ವಾದ ಮಂಡಿಸಿ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಈ ಪೈಕಿ ಸಿದ್ದರಾಮಯ್ಯ ಬಿಗಿಪಟ್ಟು ಏಕೆ? ಡಿ. ಕೆ. ಶಿವಕುಮಾರ್ ಮಂಡಿಸುತ್ತಿರುವ ಕಾರಣಗಳು ಏನಿರಬಹುದು? ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಂದು ಅವಧಿಗೆ ತಮ್ಮನ್ನೇ ಸಿಎಂ ಆಗಿ ನೇಮಕ ಮಾಡಿ ಅಂತಾ ಪಟ್ಟು ಹಿಡಿದಿದ್ದಾರೆ. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಹಲವು ಕಾರಣಗಳನ್ನು ಮುಂದಿಟ್ಟು ವಾದ ಮಾಡುತ್ತಿದ್ಧಾರೆ. ತಮ್ಮ ನಿಲುವನ್ನು ಹೈಕಮಾಂಡ್ ಎದುರು ಸ್ಪಷ್ಟವಾಗಿ ಮಂಡಿಸಲಿದ್ದಾರೆ ಅನ್ನೋ ಮಾತುಗಳಿವೆ. ಕಾಂಗ್ರೆಸ್ ಪಕ್ಷದ 135 ಶಾಸಕರ ಪೈಕಿ ಬಹುತೇಕ ಶಾಸಕರು ತಮ್ಮ ಪರ ಇದ್ದಾರೆ ಅನ್ನೋ ನಂಬಿಕೆ ಸಿದ್ದರಾಮಯ್ಯ ಅವರಿಗೆ ಇದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕನನ್ನು ಕಾಂಗ್ರೆಸ್ ಪಕ್ಷದ ನೂತನ ಶಾಸಕರೇ ಪ್ರಜಾತಾಂತ್ರಿಕವಾಗಿ ಆಯ್ಕೆ ಮಾಡಲಿ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಜೊತೆಗೆ ಒಮ್ಮೆ ಶಾಸಕಾಂಗ ಪಕ್ಷದ ನಾಯಕನಾಗಿ ಸಿಎಂ ಆದರೆ ನನಗೇ 5 ವರ್ಷಗಳ ಪೂರ್ಣಾವಧಿ ಅಧಿಕಾರವನ್ನೂ ಕೊಡಿ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಬೀದರ್ ಜಿಲ್ಲೆಯಿಂದ ಹಿಡಿದು ಚಾಮರಾಜನಗರ ಜಿಲ್ಲೆವರೆಗೆ ರಾಜ್ಯಾದ್ಯಂತ ನನಗೆ ವರ್ಚಸ್ಸು ಇದೆ. ಜನಪ್ರಿಯತೆ ಇದೆ ಅನ್ನೋದು ಸಿದ್ದರಾಮಯ್ಯ ವಾದ. ಇದಲ್ಲದೆ ಈ ಹಿಂದೆ ನಡೆದ ಸರ್ವೆಗಳೂ ಕೂಡಾ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಬಿಂಬಿಸಿವೆ. ಜನಮತವೂ ನನ್ನ ಪರ ಇದೆ ಅನ್ನೋ ವಾದ ಸಿದ್ದರಾಮಯ್ಯ ಅವರದ್ದು. ಇನ್ನು ಚುನಾವಣೆಗೆ ಒಂದು ವರ್ಷ ಮುನ್ನವೇ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ರೂಪಿಸುವಲ್ಲಿ ಹಾಗೂ ಹೋರಾಟ ನಡೆಸುವಲ್ಲಿ ತಮ್ಮ ಪಾತ್ರ ದೊಡ್ಡದಿದೆ ಅನ್ನೋ ವಾದವನ್ನೂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಇನ್ನು ಚುನಾವಣೆ ವೇಳೆ ಅಹಿಂದ ಮತಗಳನ್ನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಲ್ಲಿ ನನ್ನ ಕೊಡುಗೆಯೇ ಹೆಚ್ಚು ಅನ್ನೋದು ಸಿದ್ದು ವಾದ. ಈಗ ತಾವು ಮುಖ್ಯಮಂತ್ರಿ ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲ ಆಗಲಿದೆ ಅನ್ನೋದು ಸಿದ್ದರಾಮಯ್ಯ ನಿಲುವು. ಸಿದ್ದರಾಮಯ್ಯ ಜಯ ಸಾಧಿಸಿರುವ ವರುಣಾ ಕ್ಷೇತ್ರದಲ್ಲಿ ಈ ಹಿಂದೆ ಯತೀಂದ್ರ ಗೆಲುವು ಸಾಧಿಸಿ ಶಾಸಕರಾಗಿದ್ದರು. ತಂದೆಗಾಗಿ ತಮ್ಮ ಕ್ಷೇತ್ರ ತ್ಯಾಗ ಮಾಡಿದರು. ಅವರ ತ್ಯಾಗಕ್ಕೆ ಬೆಲೆ ಬೇಡವೇ ಅನ್ನೋದು ಸಿದ್ದರಾಮಯ್ಯ ವಾದ. ಎಲ್ಲಕ್ಕಿಂತಾ ಹೆಚ್ಚಾಗಿ ಒಂದು ವೇಳೆ ಡಿಕೆಶಿ ಅವರನ್ನ ಸಿಎಂ ಮಾಡಿದರೆ ಮಾಜಿ ಸಿಎಂ ಆಗಿರುವ ತಮ್ಮ ಹಿರಿತನಕ್ಕೆ ತಕ್ಕ ಹುದ್ದೆ ಯಾವುದಿದೆ ಅನ್ನೋದು ಸಿದ್ದರಾಮಯ್ಯ ಅವರ ಪ್ರಶ್ನೆ. ಈ ಹಂತದಲ್ಲಿ ಮೊದಲ 3 ವರ್ಷಗಳ ಕಾಲ ನೀವು ಸಿಎಂ ಆಗಿ ಎಂದು ಹೈಕಮಾಂಡ್ ಮನವೊಲಿಸಿದರೆ ಸಿದ್ದರಾಮಯ್ಯ
ಚುನಾವಣೆ ಮತದಾನಕ್ಕೆ ಮುನ್ನ ಕುಚಿಕು ಗೆಳೆಯರಾಗಿದ್ದ ಡಿಕೆಶಿ – ಸಿದ್ದು ಈಗ ಸಿಎಂ ಸೀಟಿಗಾಗಿ ಗುದ್ದಾಟ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹೊರಬಿದ್ದಿದ್ದೇ ತಡ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಿಟ್ಟಾಗಿದ್ದಾರೆ. ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. ಅಧಿಕಾರಕ್ಕಾಗಿ ಪಟ್ಟು ಹಿಡಿಯೋದು, ಚೌಕಾಶಿ ಮಾಡೋದು ಸಹಜ ಅನ್ನೋದು ಕಾಂಗ್ರೆಸ್ ನಾಯಕರ ವಾದ. ಸಿಎಂ ಪಟ್ಟ ತಮಗೇ ಬೇಕು ಅಂತಾ ಡಿಕೆಶಿ ಒತ್ತಡ ಹೇರುತ್ತಿರೋದಕ್ಕೆ ಬಲವಾದ ಕಾರಣಗಳೂ ಇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ವಾಲಬಹುದು ಅನ್ನೋ ಭೀತಿಯಲ್ಲಿ ಇರುವ ಡಿಕೆಶಿ, ಹೈಕಮಾಂಡ್ ಮಟ್ಟದಲ್ಲೇ ನೂತನ ಸಿಎಂ ಆಯ್ಕೆ ನಡೆಯಲಿ ಅನ್ನೋ ವಾದ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಬಾರಿ ತಾವೇ ಸಿಎಂ ಆಗಬೇಕು ಅನ್ನೋದು ಡಿಕೆಶಿ ಒತ್ತಾಯ. ಒಂದು ವೇಳೆ 2 ಅವಧಿಗೆ ಇಬ್ಬರನ್ನು ಸಿಎಂ ಆಗಿ ನೇಮಕ ಮಾಡೋದಾದ್ರೆ ಮೊದಲ ಅವಧಿಗೆ ನಾನೇ ಸಿಎಂ ಆಗಬೇಕು ಅನ್ನೋದು ಡಿಕೆಶಿ ಆಗ್ರಹ. ಕಾಂಗ್ರೆಸ್ ಸಂಪ್ರದಾಯದ ಪ್ರಕಾರ ಕೆಪಿಸಿಸಿ ಅಧ್ಯಕ್ಷರ ಸಾರಥ್ಯದಲ್ಲಿ ಚುನಾವಣೆ ನಡೆದು ಪಕ್ಷ ಗೆದ್ದರೆ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಬೇಕು. ಹೀಗಾಗಿ, ನನಗೇ ಸಿಎಂ ಪಟ್ಟ ಕೊಡಿ ಅನ್ನೋದು ಡಿಕೆಶಿ ಒತ್ತಾಯ. ಈ ಹಿಂದೆ ಎಸ್. ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕಾಂಗ್ರೆಸ್ ಜಯಭೇರಿ ಬಾರಿಸಿ ಕೃಷ್ಣ ಅವರೇ ಸಿಎಂ ಆಗಿದ್ದರು. ಇನ್ನು ಕಳೆದ ಬಾರಿ ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿದ್ದರು. ಹೀಗಾಗಿ, ಈ ಬಾರಿ ನನಗೆ ಕೊಡಿ ಅನ್ನೋದು ಡಿಕೆಶಿ ವಾದ. ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳು ಜೆಡಿಎಸ್ನಿಂದ ಕಾಂಗ್ರೆಸ್ ತೆಕ್ಕೆಗೆ ವಾಲಿದೆ. ನಾನು ಸಿಎಂ ಆಗ್ತೇನೆ ಅಂತಾನೇ ಒಕ್ಕಲಿಗ ಮತಗಳು ಕಾಂಗ್ರೆಸ್ಗೆ ಬಂದಿವೆ. ಒಂದು ವೇಳೆ ನಾನು ಸಿಎಂ ಆಗದಿದ್ದರೆ ಒಕ್ಕಲಿಗರು ಸಿಟ್ಟಾಗ್ತಾರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಹಿನ್ನಡೆ ಆಗಬಹುದು ಅನ್ನೋದು ಡಿಕೆಶಿ ನಿಲುವು. ಎಲ್ಲಕ್ಕಿಂತಾ ಹೆಚ್ಚಾಗಿ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಅದರೆ, ಎರಡನೇ ಅವಧಿಗೆ ತಮಗೆ ಅಧಿಕಾರ ಬಿಟ್ಟುಕೊಡಲು ನಿರಾಕರಿಸಬಹುದು ಅನ್ನೋದು ಭೀತಿಯೂ ಶಿವಕುಮಾರ್ ಅವರಿಗೆ ಇರಬಹುದು. ಈ ಹಂತದಲ್ಲಿ ಹೈಕಮಾಂಡ್ ಸಂಧಾನ ಮಾಡಿ ಮೊದಲ ಅವಧಿಗೆ ಕೇವಲ 2 ವರ್ಷ ನೀವು ಸಿಎಂ ಆಗಿ ಎಂದು ಸಿದ್ದರಾಮಯ್ಯ ಅವರಿಗೆ ಮನವೊಲಿಸಿ ಎರಡನೇ ಅವಧಿಗೆ ಡಿಕೆಶಿ ಅವರಿಗೆ 3 ವರ್ಷಗಳ ಸಿಎಂ ಪಟ್ಟ ಬಿಟ್ಟುಕೊಟ್ಟರೆ ಒಪ್ಪಬಹುದೇನೋ.. ಆದ್ರೆ, ಇದ್ಯಾವುದೂ ಖಚಿತವಾಗಿಲ್ಲ.
ಸಿದ್ದರಾಮಯ್ಯ ಪರವಾಗಿ ಸಹಜವಾಗಿ ಕುರುಬ ಸಮುದಾಯ ನಿಂತಿದೆ. ಕುರುಬ ಸಮುದಾಯದ ಸ್ವಾಮೀಜಿಗಳು, ಕುರುಬರ ಸಂಘ ಕೂಡಾ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಅಂತಾ ಆಗ್ರಹ ಮಾಡಿದೆ. ಹೈಕಮಾಂಡ್ ನಾಯಕರಿಗೆ ಒತ್ತಡ ಹೇರೋದಕ್ಕೂ ಮುಂದಾಗಿದೆ. ಕಾಂಗ್ರೆಸ್ ಪಕ್ಷದ 135 ನೂತನ ಶಾಸಕರ ಪೈಕಿ ಕನಿಷ್ಟ 100 ಶಾಸಕರಾದರೂ ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದಲೇ ಗೆದ್ದಿದ್ದಾರೆ ಅನ್ನೋದು ಕುರುಬರ ಸಂಘದ ವಾದ. ಇನ್ನು ಸಿದ್ದರಾಮಯ್ಯ ಅವರು ಇದು ತಮ್ಮ ಕೊನೆಯ ಚುನಾವಣೆ ಅಂತಾ ಘೋಷಣೆ ಮಾಡಿ ಆಗಿದೆ. ಹೀಗಾಗಿ, ಕೊನೆಯ ಬಾರಿ ಸಿದ್ದರಾಮಯ್ಯ ಅವರಿಗೇ ಅವಕಾಶ ಸಿಗಬೇಕು ಅನ್ನೋ ಒತ್ತಾಯವೂ ಇದೆ.
ರಾಜಸ್ಥಾನ ಕಾಂಗ್ರೆಸ್ನ ಅವಾಂತರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಅದೇ ರೀತಿ ವಾತಾವರಣ ಕರ್ನಾಟಕದಲ್ಲಿ ಆಗಬಾರದಲ್ವಾ? ನಾಯಕರ ನಡುವಣ ಕಿತ್ತಾಟವೇ ಸುದ್ದಿಯಲ್ಲಿದ್ದರೆ, ಅಭಿವೃದ್ಧಿ ಕೆಲಸ ಕಾರ್ಯಗಳ ಕಥೆ ಏನು? ಸಿಎಂ ಆಯ್ಕೆ ಹೊತ್ತಲ್ಲೇ ಇಷ್ಟೊಂದು ಕಿತ್ತಾಟವಾದ್ರೆ ಮಂತ್ರಿ ಮಂಡಲ ರಚನೆ ಯಾವಾಗ? ಸರ್ಕಾರದ ಆಡಳಿತ ಯಂತ್ರ ಮುಂದಕ್ಕೆ ಸಾಗೋದು ಯಾವಾಗ? ಈ ಪ್ರಶ್ನೆಗೆ ದಿಗ್ಗಜ ನಾಯಕರೇ ಉತ್ತರ ಹೇಳಬೇಕು..