ವೈದ್ಯರ ಬಳಿ ಯಾವುದೇ ಕಾಯಿಲೆಗೆ ಚಿಕಿತ್ಸೆಗೆ ತೆಗೆದುಕೊಂಡ ಮೇಲೆ ಕೊನೆಗೆ ಅವರು ಔಷಧಿಗಳನ್ನು ಕೊಡುವುದರ ಜೊತೆಗೆ ತರಕಾರಿಗಳು ಮತ್ತು ಹಣ್ಣುಗಳನ್ನು ಚೆನ್ನಾಗಿ ಸೇವಿಸಿ ಎಂದು ಹೇಳುವುದನ್ನು ಮರೆಯುವುದಿಲ್ಲ. ಏಕೆಂದರೆ ವಿಶೇಷವಾಗಿ ನಾವು ಸೇವಿಸುವ ತರಕಾರಿ ಮತ್ತು ಹಣ್ಣುಗಳಲ್ಲಿ ನಮ್ಮ ಆರೋಗ್ಯ ಚೆನ್ನಾಗಿರಲು ಮುಖ್ಯವಾಗಿ ಬೇಕಾದ ಪೋಷಕಾಂಶಗಳು ಮತ್ತು ಜೀವಸತ್ವಗಳು ಇರುತ್ತವೆ.
ತರಕಾರಿಗಳಲ್ಲಿ ಸೌತೆಕಾಯಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸೌತೆಕಾಯಿ ಯಾವುದೇ ತರಕಾರಿ ಅಂಗಡಿಯಲ್ಲಿ ದೊರೆಯುವ ಒಂದು ಪದಾರ್ಥವಾಗಿದೆ. ಇದನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಇದು ಒಂದು ಅತ್ಯುತ್ತಮವಾದ ಡಿಟಾಕ್ಸಿಫಿಕೇಶನ್ ಡೈಯಟ್ ವಸ್ತುವಾಗಿ ಅಥವಾ ಸ್ವಾಭಾವಿಕ ಕ್ಲೀನ್ಸರ್ ಆಗಿ ಪ್ರಯೋಜನಕಾರಿಯಾಗಿದೆ. ಸೌತೆಕಾಯಿಯು ಬಾಹ್ಯವಾಗಿ ಮತ್ತು ಆಂತರಿಕವಾಗಿ ಪ್ರಯೋಜನಗಳನ್ನು ನೀಡುವ ತರಕಾರಿಯಾಗಿದೆ.
ಸೌತೆಕಾಯಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ಅರಿತೇ ಇದ್ದೇವೆ. ಶರೀರಕ್ಕೆ ಹೊರಗಿನಿಂದಲೂ ಒಳಗಿನಿಂದಲೂ ನೀಡುವ ಪೋಷಣೆ ಅಪಾರವಾಗಿದೆ. ಬಹುತೇಕ ನೀರೇ ತುಂಬಿರುವ ಸೌತೆಯಲ್ಲಿ ವಿಟಮಿನ್ನುಗಳಾದ ವಿಟಮಿನ್ ಕೆ, ಸಿ ಮತ್ತು ಎ ಸಹಾ ಇದೆ. ಇದರ ಜೊತೆ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಸಹಾ ಇವೆ. ಹಸಿಯಾಗಿಯೂ ತಿನ್ನಬಹುದಾದ ಸೌತೆಯನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಇದರಲ್ಲಿರುವ ಕರಗುವ ನಾರಿನ ಪ್ರಯೋಜನವನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಬಹುದು. ಅಲ್ಲದೇ ಜ್ಯೂಸ್ ಮೂಲಕ ಸೇವಿಸಿದ ಸೌತೆಯಿಂದ ಪೋಷಕಾಂಶಗಳೂ ಪರಿಪೂರ್ಣವಾಗಿ ಲಭಿಸುತ್ತವೆ ಹಾಗೂ ಜೀರ್ಣಾಂಗದ ಎಲ್ಲಾ ಹಂತಗಳಲ್ಲಿ ಹೀರಲ್ಪಡುತ್ತವೆ.
ಸೌತೆಕಾಯಿಯ ಬಳಕೆಯು ಬಿಸಿಲಿನ ಧಗೆಯಿಂದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸೌತೆಕಾಯಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಮಾಡುವುದು ಉತ್ತಮ. ಜ್ಯೂಸ್, ಸಲಾಡ್, ಇನ್ಯಾವುದೇ ರೀತಿಯಲ್ಲಿ ಖಾದ್ಯವನ್ನು ತಯಾರಿಸಿಕೊಂಡು ತಿನ್ನಬಹುದು.ಆದರೆ ಇದರ ಅತಿಯಾದ ಸೇವೆನೆಯಿಂದ ದೇಹವು ಅತಿ ತಂಪಾಗಿ ಶೀತವಾಗುವ ಸಂಭವಿರುತ್ತದೆ. ಆದ್ದರಿಂದ ದೇಹದ ಉಷ್ಣತೆಗೆ ತಕ್ಕಂತೆ ಬಳಸುವುದು ಉತ್ತಮ.