ವಿಟಮಿನ್ B12 ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅತಿ ಅವಶ್ಯವಾಗಿರುವ ಪೋಷಕಾಂಶವಾಗಿದೆ. ಈ ಅವಶ್ಯಕ ವಿಟಮಿನ್ನ ಕೊರತೆಯು ಹಲವಾರು ರೀತಿಯ ಅನಾರೋಗ್ಯಗಳಿಗೆ ಕಾರಣವಾಗಬಹುದು ಹಾಗೂ ಇದರ ಕೊರತೆಯನ್ನು ದೇಹದ ವಿವಿಧ ಭಾಗಗಳ ಮೇಲೆ ಆಗುವ ಪರಿಣಾಮದಿಂದ ಕಂಡುಕೊಳ್ಳಬಹುದು.
ಇದೊಂದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು ಸಾಮಾನ್ಯವಾಗಿ ಮಾಂಸಾಹಾರ ಹಾಗೂ ಮೀನು ಮೊಟ್ಟೆ ಮತ್ತು ಡೈರಿ ಉತ್ಪನ್ನಗಳ ಮೂಲಕ ಲಭಿಸುತ್ತದೆ. ನಮಗೆ ನಿತ್ಯವೂ 2.4 ಮೈಕ್ರೋ ಗ್ರಾಂ ನಷ್ಟು ಈ ವಿಟಮಿನ್ನ ಅಗತ್ಯತೆ ಇದೆ. ಸಸ್ಯಾಹಾರದ ಮೂಲಕ ಇದು ಅತಿ ಕಡಿಮೆ ಲಭಿಸುವ ಕಾರಣ ಸಸ್ಯಾಹಾರಿಗಳು ಈ ಕೊರತೆಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಕೆಲವು ಔಷಧಿಗಳ ಪರಿಣಾಮವಾಗಿಯೂ ಇದರ ಕೊರತೆ ಎದುರಾಗಬಹುದು.
ವಿಟಮಿನ್ B12 ಕೊರತೆಯಿಂದ ದೇಹದ ಸಾಮಾನ್ಯ ಕಾರ್ಯನಿರ್ವಹಣೆಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಸಾಕಷ್ಟು ವಿಟಮಿನ್ B12 ಇಲ್ಲದೇ, ದೇಹಕ್ಕೆ ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಕಷ್ಟವಾಗುತ್ತದೆ, ಇದು ಮೆಗಾಲೊಬ್ಲಾಸ್ಟಿಕ್ ಅನೀಮಿಯಾ ಎಂಬ ರಕ್ತಹೀನತೆಯ ಸ್ಥಿತಿ ಎದುರಾಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದು ನರಮಂಡಲದ ಮೇಲೂ ಪರಿಣಾಮ ಬೀರಬಹುದು, ಇದು ನರವೈಜ್ಞಾನಿಕ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ವಿಟಮಿನ್ B12 ಕೊರತೆಯನ್ನು ಎದುರಿಸುತ್ತಿರುವ ವ್ಯಕ್ತಿಗಳ ದೇಹದಲ್ಲಿ ಸ್ಪಷ್ಟವಾಗಿ ಗೋಚರಿಸುವ ಕೆಲವು ಲಕ್ಷಣಗಳು ಈ ಕೆಳಗಿನಂತಿವೆ.
ವಿಟಮಿನ್ B12 ಕೊರತೆಯ ಒಂದು ಸಾಮಾನ್ಯ ಲಕ್ಷಣವೆಂದರೆ ಸ್ನಾಯುಗಳು ನಿಃಶಕ್ತಿಗೊಳ್ಳುವುದು. ಈ ದೌರ್ಬಲ್ಯವು ವಸ್ತುಗಳನ್ನು ಎತ್ತುವಲ್ಲಿ, ದೈನಂದಿನ ಕಾರ್ಯಗಳನ್ನು ನಿರ್ವಹಿಸುವಲ್ಲಿ ಅಥವಾ ದೀರ್ಘಕಾಲದವರೆಗೆ ನಿಂತುಕೊಳ್ಳಲು ಸಾಧ್ಯವಾಗದಂತೆ ಮಾಡಬಹುದು. ಸ್ನಾಯುಗಳಿಗೆ ಆಮ್ಲಜನಕವನ್ನು ಸಾಗಿಸಲು ಕಾರಣವಾದ ಕೆಂಪು ರಕ್ತ ಕಣಗಳು ಸಾಕಷ್ಟು ಉತ್ಪಾದನೆಯಾಗದ ಕಾರಣದಿಂದ ಇದು ಸಂಭವಿಸುತ್ತದೆ
ವಿಟಮಿನ್ B12 ಕೊರತೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಹಸ್ತ ಮತ್ತು ಪಾದಗಳು ಮರಗಟ್ಟಿದಂತಾಗುವುದು ಅಥವಾ ಅಥವಾ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಸಂವೇದನೆಯನ್ನು ಅನುಭವಿಸುವುದು, ಇದನ್ನು ಬಾಹ್ಯ ನರರೋಗ ಎಂದೂ ಕರೆಯಲಾಗುತ್ತದೆ
ವಿಟಮಿನ್ B12 ಕೊರತೆಯಿಂದ ಬಾಯಿಯ ಆರೋಗ್ಯವೂ ಬಾಧೆಗೊಳ್ಳುತ್ತದೆ ಹಾಗೂ ನಾಲಿಗೆಯೂ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಈ ಸ್ಥಿತಿಯನ್ನು ಗ್ಲಾಸೈಟಿಸ್ (glossitis) ಎಂದು ಕರೆಯಲಾಗುತ್ತದೆ. ವಿಟಮಿನ್ B12 ಕೊರತೆಯಿಂದ ನಾಲಿಗೆಯ ಹೊರಭಾಗದಲ್ಲಿ ಉರಿಯೂತ ಮತ್ತು ಊದಿಕೊಳ್ಳುವಿಕೆ ಕಾಣಿಸಿಕೊಳ್ಳುತ್ತದೆ ಮತ್ತು ನಾಲಿಗೆ ಹೊಳೆಯುವಂತೆ ಮಾಡುತ್ತದೆ. ನಾಲಿಗೆ ಸರಿಯಾಗಿ ತಿರುಗದೇ ಮಾತುಗಳು ತೊದಲುವಂತೆ ಹಾಗೂ ಊಟ ಮಾಡಲೂ ಕಷ್ಟಕರವಾಗುತ್ತದೆ
ವಿಟಮಿನ್ B12 ಕೊರತೆಯಿಂದ ಹೃದಯದ ಬಡಿತದ ಗತಿ ತೀವ್ರಗೊಳ್ಳುತ್ತದೆ. ಈ ಸ್ಥಿತಿಯನ್ನು ಟ್ಯಾಕಿಕಾರ್ಡಿಯಾ (tachycardia) ಎಂದು ವೈದ್ಯರು ಗುರುತಿಸುತ್ತಾರೆ.