ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಅರೆಸ್ಟ್ ಆಗಿ 10 ದಿನ ಕಳೆದಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ದರ್ಶನ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ದರ್ಶನ್ ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ದರ್ಶನ್ ರನ್ನು ಗಾಡ್ಫಾದರ್, ಗುರು ಎಂದೇ ಭಾವಿಸಿದ್ದ, ಈ ಹಿಂದೆ ಕೆಲವು ವಿವಾದಗಳಾದ ದರ್ಶನ್ ಪರವಹಿಸಿದ್ದ ನಟಿ ರಚಿತಾ ರಾಮ್ ಇದೀಗ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರೇಣುಕಾ ಸ್ವಾಮಿ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಟಿ ರಚಿತಾ ರಾಮ್, ‘ಈ ನೋಟ್ ಅನ್ನು ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದಾನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು, ಮೊದಲಿಗೆ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನಿಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ’ ಎಂದಿದ್ದಾರೆ.
ಇನ್ನೂ ದರ್ಶನ್ ವಿಷಯವಾಗಿ ಬರೆದುಕೊಂಡಿರುವ ರಚಿತಾ ರಾಮ್, ‘ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್. ದರ್ಶನ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿರಿ ಎಂದು ಆಶಿಸುತ್ತೇನೆ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಅವರೊಟ್ಟಿಗೆ ನಟಿ ಪವಿತ್ರಾ ಗೌಡ ಹಾಗೂ ಇನ್ನೂ 19 ಮಂದಿ ಆರೋಪಿಗಳಿದ್ದಾರೆ. ಜೂನ್ 20 ರವರೆಗೆ ದರ್ಶನ್ ಪೊಲೀಸರ ಕಸ್ಟಡಿಯಲ್ಲಿರಲಿದ್ದು, ಅದಾದ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಗಲು ರಾತ್ರಿ ಎನ್ನದೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.