ಬೆಂಗಳೂರು: ನಮ್ಮ ಸರ್ಕಾರದ ಅವಧಿಯ ಯಾವುದೇ ರೀತಿ ತನಿಖೆಗೆ ನಾವು ಸಿದ್ಧ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಮಾಡಬಹುದು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ ಸಿಐಡಿ ತನಿಖೆಗೆ ನಾನೇ ಹಿಂದೆ ದೂರು ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಎಫ್ಐಆರ್ ಆಗಿರಲಿಲ್ಲ. ಹೊಸ ಸರ್ಕಾರ ಬಂದಿದೆ, ಯಾವುದೇ ರೀತಿ ತನಿಖೆ ನಡೆಸಲಿ, ಎದುರಿಸಲು ನಾವು ಸಿದ್ಧ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು,
ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದರು. ಇನ್ನೂ ಎನ್.ಇ.ಪಿ ರದ್ದು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಈಗ ಮಕ್ಕಳು ಅಧ್ಯಯನ ಶುರು ಮಾಡಿದ್ದಾರೆ. ಎನ್.ಇ.ಪಿ ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಎಲ್ಲ ಎಕ್ಸ್ಪರ್ಟ್ ಅಭಿಪ್ರಾಯ ಪಡೆದು ಜಾರಿಗೆ ತರಲಾಗಿದೆ. ಈಗ ರದ್ದು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.