ಬೆಂಗಳೂರು : ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು ರಾಜಕೀಯಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಐಶ್ವರ್ಯ ಅವರು ಅವರ ತಂದೆ ಹಾಗೂ ಚಿಕ್ಕಪ್ಪನ ಪರ ಸಕ್ರಿಯವಾಗಿ ಪ್ರಚಾರ ನಡೆಸುವುದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದ ಜನರು ಡಿಕೆಶಿ ಪುತ್ರಿ ರಾಜಕೀಯಕ್ಕೆ ಬರಬಹುದು ಎಂಬ ಊಹೆಯಲ್ಲಿ ಇದ್ದರು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಐಶ್ವರ್ಯ ಹೆಗಡೆ ರಾಜಕೀಯಕ್ಕೆ ಬರುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಐಶ್ವರ್ಯ ಹೆಗ್ಡೆ ಅವರು, ನನಗೆ ರಾಜಕೀಯ ಸೇರುವ ಉದ್ದೇಶ ಇಲ್ಲ. ನಾನು ಶಿಕ್ಷಣೋದ್ಯಮಿಯಾಗಿದ್ದು, ನನಗೆ ಅದರಲ್ಲಿಯೇ ಖುಷಿ ಸಿಗುತ್ತಿದೆ. ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಈಗ ಅಗತ್ಯವಿರುವ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಇವತ್ತು ನಾವು ದೇಶದ ಬಗ್ಗೆ ಯೋಚನೆ ಮಾಡಬೇಕು. ದೇಶ ಅಭಿವೃದ್ಧಿಯಾದರೆ ನಾನು ಅಥವಾ ಯಾರಾದರೂ ಕೂಡ ಅಭಿವೃದ್ಧಿ ಹೊಂದಬಹುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಜೂನ್ 4 ರಂದು ನಮ್ಮ ಚಿಕ್ಕಪ್ಪನ ಗೆಲುವನ್ನು ಆಚರಿಸುವ ವಿಶ್ವಾಸ ನನಗೆ ಇದೆ ಎಂದು ಮಾಧ್ಯಮದವರಿಗೆ ತಿಳಿಸಿದರು. ಅದಲ್ಲದೇ ಐಶ್ವರ್ಯ ಅವರು ತಮ್ಮ ಚಿಕ್ಕಪ್ಪ ಡಿಕೆ ಸುರೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಹಿರಿಯ ಪುತ್ರಿ!
ಐಶ್ವರ್ಯ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹಿರಿಯ ಪುತ್ರಿಯಾಗಿದ್ದು, ಕಾಫಿ ಕೆಫೆ ಡೇಯ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ಥ್ಯ ಹೆಗ್ಡೆ ಅವರ ಜೊತೆ ವಿವಾಹವಾಗಿದ್ದಾರೆ. 26 ವರ್ಷದ ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಡಿಕೆ ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಟ್ರಸ್ಟಿ ಕೂಡ ಆಗಿದ್ದಾರೆ. ಸದ್ಯ ಸ್ವತಂತ್ರವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.