ಬೆಂಗಳೂರು: ಗ್ಯಾರಂಟಿ (Guarantee Scheme) ಅನುಷ್ಠಾನಕ್ಕೆ ತಂದರೆ ನಾಳೆ ಬಿಜೆಪಿಯ (BJP) ಅಸ್ತಿತ್ವವೇ ಕಳೆದುಹೋಗುತ್ತದೆ. ಮುಂದೆ 25 ವರ್ಷಗಳವರೆಗೆ ಅವರಿಗೆ ಅವಕಾಶ ಸಿಗುವುದಿಲ್ಲ ಎನ್ನುವ ಭಯದಲ್ಲಿ ಜನರಲ್ಲಿ ಒಂದು ರೀತಿಯಲ್ಲಿ ಅನುಮಾನ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ (Eshwara Khandre) ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಕ್ಯಾಬಿನೆಟ್ನಲ್ಲಿಯೇ ಗ್ಯಾರಂಟಿ ಯೋಜನೆಗಳಿಗೆ ಒಪ್ಪಿಗೆ ಕೊಡಬೇಕಿತ್ತು ಎಂಬ ಬಿಜೆಪಿ ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಜಾರಿಗೆ ತರುವುದರಲ್ಲಿ ಯಾವುದೇ ಗೊಂದಲವಿಲ್ಲ. ನಾವು ಏನು ಹೇಳಿದ್ದೇವೆ ಅದನ್ನು ಅನುಷ್ಠಾನ ಮಾಡಿ ಜಾರಿಗೆ ತರುತ್ತೇವೆ. ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಈ ರೀತಿಯಾಗಿ ಹೇಳುತ್ತಿದ್ದಾರೆ. ಜನರಿಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಿದ್ಯುತ್ ಬಿಲ್ (Electricity Bill) ಕಟ್ಟಲ್ಲ ಎಂಬ ಜನರ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಜನರು ಈಗ ಕಟ್ಟುತ್ತಿರುವುದು ಹಳೆಯ ಬಿಲ್. ಅದು ಏಪ್ರಿಲ್ ತಿಂಗಳಿನ ಬಿಲ್ ಆಗಿದ್ದು, ಮೇ ತಿಂಗಳಿನಲ್ಲಿ ಬರುತ್ತಿದೆ. ಮೇ ತಿಂಗಳಿನ ಬಿಲ್ ಜೂನ್ನಲ್ಲಿ ಬರುತ್ತದೆ. ನಮ್ಮ ಸರ್ಕಾರ ಈಗ ಅಸ್ತಿತ್ವದಲ್ಲಿದೆ. ಜೂನ್ನಿಂದ ಗ್ಯಾರಂಟಿ ಅನುಷ್ಠಾನವಾದರೇ ಜುಲೈನಲ್ಲಿ ಬಿಲ್ ಬರುತ್ತೆ. 200 ಯೂನಿಟ್ ಒಳಗಡೆ ಇರುವವರು ಯಾರೂ ಬಿಲ್ ಕಟ್ಟುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.