ನವದೆಹಲಿ: ಭದ್ರತಾ ಲೋಪದಿಂದ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ಏಕಾಏಕಿ ಬಂದು ಸ್ಮೋಕ್ ಬಾಂಬ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಸೇರಿ ಒಟ್ಟು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಆರೋಪಿಗಳ ಪೈಕಿ ಪ್ರಮುಖರಾದ ಸಾಗರ್ ಶರ್ಮಾ ಹಾಗೂ ಮೈಸೂರಿನ ಮನೋರಂಜನ್ ಕುರಿತು ತೀವ್ರ ತನಿಖೆ ನಡೆಯುತ್ತಿದೆ.
ಈ ಕುರಿತು ಆರೋಪಿ ಸಾಗರ್ ಶರ್ಮಾ ತಾಯಿ ರಾಣಿ ಶರ್ಮಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ಸಾಗರ್ ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ. ನಾವು ಕುಟುಂಬದಲ್ಲಿ ನಾಲ್ಕು ಜನರಿದ್ದೇವೆ. ನನ್ನ ಪತಿ ಕಾರ್ಪೆಂಟರ್ ಕೆಲಸ ಮಾಡುತ್ತಾರೆ. ಸಾಗರ್ ತನ್ನ ಸ್ನೇಹಿತರ ಜೊತೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಎರಡು ದಿನಗಳ ಹಿಂದೆ ಮನೆಯಿಂದ ಹೋಗಿದ್ದಾನೆ ಎಂದರು.
ಇನ್ನು ಈ ಕುರಿತು ಮಾತನಾಡಿದ ಎಸ್ಹೆಚ್ಒ, ಒಂದು ದಶಕದಿಂದ ಆರೋಪಿ ಸಾಗರ್ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದರು. ಅಲ್ಲದೇ ಲೋಕಸಭೆಯಲ್ಲಿ ನಡೆದ ಘಟನೆಯಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನಾವು ಅವರಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.