ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದು, ಈ ದೇಶಕ್ಕೆ ವಿದ್ಯಾವಂತರು ಇಲ್ಲದಿದ್ದರೂ ನಡೆಯುತ್ತೆ, ಆದ್ರೆ ಪ್ರಜ್ಞಾವಂತರು ಇರಲೇಬೇಕು. ಈಗ ಕೇಂದ್ರದಲ್ಲಿ ಸರ್ಕಾರ ಬಿಜೆಪಿಯವರದ್ದು ಇದೇ ಪರಿಸ್ಥಿತಿಯಾಗಿದೆ, ನೀವು ರಾಜ್ಯಕ್ಕೆ ಏನ್ ಕೊಟ್ರಿ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 27 ಸಂಸದರು ಇದ್ದರು ಬರಗಾಲ ಕುರಿತು ಒಂದು ಸಭೆ ಮಾಡಲಿಲ್ಲ. ಮೊದಲ ಸಲ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತರ ಖಾತೆಗೆ ಎರಡು ಸಾವಿರ ಹಣ ಹಾಕಿದ್ದೀವಿ. ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೋಗೋದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗ್ತಿಲ್ಲ.
ಕರ್ನಾಟಕಕ್ಕೆ ಅನ್ಯಾಯ ಆಗಿರೋದರಲ್ಲಿ ಅನುಮಾನವೇ ಇಲ್ಲ. ನಾವು 51 ಸೀಟು ಗೆದ್ದಿದ್ದೆವು, ನೀವು 300 ಸೀಟು ಗೆದ್ದಿದ್ದೀರಿ, ಈ ರಾಜ್ಯಕ್ಕೆ ಏನು ಮಾಡಿದ್ದೀರಿ? ಬೇರೇನೂ ಬೇಡ ನಮ್ಮ ನೀರಾವರಿ ಇಲಾಖೆಗೆ ಏನ್ ಕೊಟ್ಟಿದ್ದೀರಿ? ನಮ್ಮ ರಾಜ್ಯದ ಪರ ನಾವು ದನಿ ಎತ್ತಲೇಬೇಕು. ಬಿಜೆಪಿ ಸಂಸದರು, ದಳ ಸಂಸದರೂ ಬಂದು ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಅಂತ ಆಹ್ವಾನಿಸ್ತಿದ್ದೇನೆ. ರಾಜ್ಯದ ಹಿತ ಕಾಪಾಡಬೇಕು ಅಷ್ಟೇ ಎಂದು ಅವರು ಹೇಳಿದರು.