ಕಾಗವಾಡ : ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭೆ ಕ್ಷೇತ್ರದ ಹೂಗಾರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಪಕ್ಷದ ಅಭ್ಯರ್ಥಿ ರಾಜು ಕಾಗೆ ಅವರ ಪರ ಮತ ಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಅಮಿತ್ ಶಾ ಯಾವುದೇ ಸಭೆ ಮಾಡಿದರೂ ಏನೂ ಆಗುವುದಿಲ್ಲ. ಅಮಿತ್ ಶಾಗೂ, ಕರ್ನಾಟಕಕ್ಕೂ ಏನು ಸಂಬಂಧ ? ಆ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅವರು ಒಳ್ಳೆಯ ಕಾರ್ಯ ಮಾಡಿದ್ದಾರೆ, ಆರು ಸಲ ಶಾಸಕರಾಗಿ ಸಾಕಷ್ಟು ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ, ಇದರಿಂದ ಅಮಿತ್ ಶಾ ಬಂದ್ರೆ ಶೆಟ್ಟರ್ ಅವರಿಗೆ ಸೋಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದು,ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆಯಾ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಏನೂ ಆಗೋದಿಲ್ಲ. ಅಮಿತ್ ಶಾ ಹೇಳಿದ ತಕ್ಷಣ ಜನ ಸೋಲಿಸುತ್ತಾರಾ?..ಅಮಿತ್ ಶಾ ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದರು. ಅಮಿತ್ ಶಾ, ಮೋದಿ ನೂರು ಸಾರಿ ಬಂದ್ರೂ ಏನೂ ಆಗುವುದಿಲ್ಲ. ಕರ್ನಾಟಕದ ಜನ ಕಾಂಗ್ರೆಸ್ ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದರು.
ಮಾದ್ಯಮ ಜೊತೆ ಮಾತನಾಡುತ್ತಾ ನಿನ್ನೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದೇನೆ, ಇವತ್ತು ಚಿಕ್ಕೋಡಿ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕಾಗವಾಡ, ಕುಡಚಿ, ನಿಪ್ಪಾಣಿ,ಯಮಕರಮಡಿ ಕ್ಷೇತ್ರದಲ್ಲಿ ಪ್ರಚಾರ ಮಾಡುತಿದ್ದೇನೆ ಎಂದು ತಿಳಿಸಿದರು.