ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಪ್ರಾರಂಭವಾಗಲು 2 ದಿನ ಮಾತ್ರ ಉಳಿದಿದೆ. ಈಗಿನಿಂದಲೇ ಅಭಿಮಾನಿಗಳ ಝೇಂಕಾರ ಶುರುವಾಗಿದೆ. ಏತನ್ಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೀಸನ್ ಆರಂಭಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ಒಂದು ವಿಚಾರದಲ್ಲಿ ಖಡಕ್ ಎಚ್ಚರಿಕೆ ನೀಡಿದೆ.
ಮುಂಬರುವ ಐಸಿಸಿ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ, ಐಪಿಎಲ್ನಲ್ಲಿ ಆಡುತ್ತಿರುವ ಟೀಂ ಇಂಡಿಯಾ ಬೌಲರ್ಗಳು (ಬಿಸಿಸಿಐನ ವಾರ್ಷಿಕ ಒಪ್ಪಂದಕ್ಕೊಳಪಟ್ಟವರು) ನೆಟ್ಸ್ನಲ್ಲಿ ಅಭ್ಯಾಸದ ಸಮಯದಲ್ಲಿ ಹೆಚ್ಚು ಬೌಲ್ ಮಾಡದಂತೆ ಆದೇಶ ಹೊರಡಿಸಿದೆ.
ಈ ಬಾರಿಯ ಐಪಿಎಲ್ ಅಂತ್ಯದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ಪಂದ್ಯವನ್ನು ಆಡಲು ಭಾರತ ತಂಡವು ಇಂಗ್ಲೆಂಡ್ಗೆ ತೆರಳಲಿದೆ. ಹೀಗಾಗಿ ಆ ಸಮಯದಲ್ಲಿ ಭಾರತೀಯ ಬೌಲರ್ಗಳ ಸಂಪೂರ್ಣ ಫಿಟ್ನೆಸ್ ಬಹಳ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಈ ಸೂಚನೆ ನೀಡಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಫಿಸಿಯೋ ನಿತಿನ್ ಪಟೇಲ್ ಮತ್ತು ಭಾರತದ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರು ಮೀಟಿಂಗ್ನಲ್ಲಿ ಈ ಸೂಚನೆಗಳ ಬಗ್ಗೆ ಎಲ್ಲಾ ಫ್ರಾಂಚೈಸಿಗಳ ಕೋಚ್ಗಳು ಮತ್ತು ಫಿಸಿಯೋಥೆರಪಿಸ್ಟ್ಗಳಿಗೆ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅಲ್ಲದೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಈಗಾಗಲೇ 20 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಅವರ ಕೆಲಸದ ಹೊರೆಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಐಪಿಎಲ್ ಸಮಯದಲ್ಲಿ ವೇಗಿಗಳು ಯಾವುದೇ ಗಂಭೀರ ಗಾಯಕ್ಕೆ ಒಳಗಾಗಬಾರದು ಎಂದು ಬಿಸಿಸಿಐ ಆಶಿಸಿದೆ.
ಈ ಸೂಚನೆಗಳಿಗೆ ಸಂಬಂಧಿಸಿದಂತೆ, ಫ್ರಾಂಚೈಸಿಗಳಿಗೆ ಎಲ್ಲವನ್ನೂ ಈಗಾಗಲೇ ವಿವರಿಸಲಾಗಿದೆ ಎಂದು ಮಂಡಳಿಯ ಅಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.!