ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಇದೀಗ ಗ್ಯಾಸ್ ಸಿಲಿಂಡರ್ ಕೂಡಾ ಚುನಾವಣಾ ವಿಚಾರವಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿಚಾರವನ್ನೇ ಪ್ರಧಾನವಾಗಿ ಬಿಂಬಿಸಲು ಕಾಂಗ್ರೆಸ್, ಜೆಡಿಎಸ್, ಎಎಪಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಮುಂದಾಗಿವೆ. ಆದ್ರೆ, ವಿರೋಧ ಪಕ್ಷಗಳ ಆರೋಪಕ್ಕೆ ತಕ್ಕ ತಿರುಗೇಟು ಕೊಡಲು ಬಿಜೆಪಿ ಕೂಡಾ ತಯಾರಿ ಮಾಡಿಕೊಳ್ತಿದೆ. ಉಜ್ವಲಾ ಯೋಜನೆಯಡಿ ಸರ್ಕಾರ ನೀಡಿದ ಲಕ್ಷಾಂತರ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನೇ ಬಿಜೆಪಿ ತನ್ನ ಸಮರ್ಥನೆಯ ಪ್ರತ್ಯಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದೆ.
ಕಾಂಗ್ರೆಸ್ ಪಕ್ಷದಿಂದ ಸಿಲಿಂಡರ್ ಬಾಂಬ್..!
‘ಮತದಾರರೇ.. ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿದೆ. ನೀವು ಮತ ಹಾಕುವ ಮುನ್ನ ನಿಮ್ಮ ಮನೆಯಲ್ಲಿ ಇರುವ ಗ್ಯಾಸ್ ಸಿಲಿಂಡರ್ಗಳತ್ತ ಒಮ್ಮೆ ನೋಡಿ, ನಂತರ ತೀರ್ಮಾನ ಮಾಡಿ’ ಎಂದು ಕೆಲವು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜನತೆಗೆ ಕರೆ ನೀಡಿದ್ದರು. ಅಡುಗೆ ಅನಿಲದ ಬೆಲೆ ಏರಿಕೆ ವಿಚಾರವಾಗಿ ದನಿ ಎತ್ತಿರುವ ಕಾಂಗ್ರೆಸ್, ಚುನಾವಣೆ ವೇಳೆ ಬಿಜೆಪಿ ವಿರುದ್ಧ ಇದನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
2014ಕ್ಕೆ ಮುನ್ನ ಯುಪಿಎ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 410 ರೂ. ಇತ್ತು. ಆದರೆ, ಇಂದು 1,100 ರೂ. ಗಡಿ ದಾಟಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರ ಎದುರು ಈ ವಿಚಾರ ಪ್ರಸ್ತಾಪ ಮಾಡಬೇಕು ಎಂದು ಕಾಂಗ್ರೆಸ್ ಹೇಳಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆ, ಸಮಾರಂಭ, ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಇದೇ ವಿಚಾರವನ್ನು ಪ್ರಧಾನವಾಗಿ ಬಿಂಬಿಸಲು ತೀರ್ಮಾನಿಸಿದೆ. ಅಷ್ಟೇ ಅಲ್ಲ, ಮಧ್ಯಮ ವರ್ಗದ ಜನ ಸಮೂಹ ಹಾಗೂ ಗೃಹಿಣಿಯರ ಎದುರು ಇದೇ ವಿಚಾರವನ್ನು ಪ್ರಮುಖವಾಗಿ ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ನಿಂದಲೂ ಗ್ಯಾಸ್ ಸಿಲಿಂಡರ್ ಅಸ್ತ್ರ ಬಳಕೆ!
ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ವರ್ಷಕ್ಕೆ 5 ಎಲ್ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ಕೊಡೋದಾಗಿ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ, ಕೇಂದ್ರ ಸರ್ಕಾರವು ಉಜ್ವಲಾ ಯೋಜನೆ ಅಡಿ ಮಹಿಳೆಯರಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿ ವೇಳೆ ಸಬ್ಸಿಡಿ ಕೊಡೋದಾಗಿ ಹೇಳಿತ್ತು. ಆದ್ರೆ, ಈ ಆಶ್ವಾಸನೆಯನ್ನು ಬಿಜೆಪಿ ಈಡೇರಿಸಿಲ್ಲ. ಇದೀಗ ಗ್ಯಾಸ್ ಸಿಲಿಂಡರ್ ಬೆಲೆ 1 ಸಾವಿರ ರೂ.ಗೂ ಹೆಚ್ಚು ಇದೆ. ಹೀಗಾಗಿ, ಬಡ ಕುಟುಂಬಗಳು ಬದುಕು ಸಾಗಿಸೋದೇ ಕಷ್ಟವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಲ್ಲದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ 10 ಸಿಲಿಂಡರ್ಗಳನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಲು ನೆರವು ನೀಡಲಾಗುವುದು ಎಂದೂ ಕುಮಾರಸ್ವಾಮಿ ಆಶ್ವಾಸನೆ ನೀಡಿದ್ಧಾರೆ.
ಎಎಪಿ ಕೂಡಾ ಹಿಂದೆ ಬಿದ್ದಿಲ್ಲ!
ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಗಳಿಸಿದ ಆಮ್ ಆದ್ಮಿ ಪಕ್ಷ ಕೂಡಾ ಗ್ಯಾಸ್ ಸಿಲಿಂಡರ್ ವಿಚಾರ ಪ್ರಸ್ತಾಪ ಮಾಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ಅಡುಗೆ ಮನೆಗೆ ಅತ್ಯಗತ್ಯವಾಗಿ ಬೇಕಾದ ಗ್ಯಾಸ್ ಸಿಲಿಂಡರ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ ಎಂದು ವಿಚಾರ ಪ್ರಸ್ತಾಪ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಎಎಪಿ, ಇದೇ ವಿಚಾರದಲ್ಲಿ ಮತದಾರರ ಮನ ಗೆಲ್ಲಲು ಯತ್ನಿಸಿದೆ.
ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ಸಮರ್ಥನೆ ಏನು?
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಸಮರ್ಥನೆ ನೀಡಿರುವ ಬಿಜೆಪಿ, ಉಜ್ವಲಾ ಯೋಜನೆಯಡಿ ಉಚಿತವಾಗಿ ವಿತರಣೆ ಮಾಡಲಾಗಿರುವ ಗ್ಯಾಸ್ ಸಿಲಿಂಡರ್ಗಳ ಅಂಕಿ ಅಂಶ ನೀಡುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನೋದು ಮೇಲ್ಮಧ್ಯಮ ವರ್ಗದ ಸ್ವತ್ತಾಗಿತ್ತು. ಆದ್ರೆ, ಮೋದಿ ಸರ್ಕಾರವು ಬಡವರ ಮನೆಗಳಿಗೂ ಗ್ಯಾಸ್ ಸಿಲಿಂಡರ್ ತಲುಪಿಸಿದೆ. ಕರ್ನಾಟಕದಲ್ಲಿ ಫೆಬ್ರವರಿ 2023ರವರೆಗೆ 37.6 ಲಕ್ಷ ಮನೆಗಳಿಗೆ ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ಸಿಕ್ಕಿದೆ. ಹೊಗೆ ಮುಕ್ತ ಅಡುಗೆ ಮನೆಯಿಂದಾಗಿ ಮಹಿಳೆಯರ ಆರೋಗ್ಯ ಸುಧಾರಿಸಿದೆ ಎಂದು ಬಿಜೆಪಿ ಹೇಳಿದೆ.
ಇದಲ್ಲದೆ 2020-21ರ ಅವಧಿಯಲ್ಲಿ 1.5 ಕೋಟಿ ಉಚಿತ ಗ್ಯಾಸ್ ಸಿಲಿಂಡರ್ ನಿಡಲಾಗಿದೆ. ಆದ್ರೆ, ಪ್ರತಿಪಕ್ಷಗಳು ಮಾತ್ರ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ. ಅದೇನೇ ಇರಲಿ, ಸದ್ಯದ ಮಟ್ಟಿಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿ ಪಕ್ಷಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿಚಾರ ಪ್ರಮುಖ ಅಸ್ತ್ರವಾಗಿದೆ. ಕರ್ನಾಟಕ ಮಾತ್ರವಲ್ಲ ಮುಂಬರುವ ನಾಲ್ಕು ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ.