ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್ನಾದ್ಯಂತ ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್ಲ್ಯಾಂಡ್ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್ನಾದ್ಯಂತ ಡಜನ್ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ.
ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ.
ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.
ಲಕ್ಷಣಗಳೇನು..?: ಸೋಂಕು ತಗುಲಿದ ಕೂಡಲೇ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. 5 ರಿಂದ 14 ದಿನಗಳ ಬಳಿಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆತನಿಗೆ ಶೀತ, ಒಣ ಕೆಮ್ಮು, ವಾಂತಿ, ಭೇದಿ, ತಲೆನೋವು, ಸ್ನಾಯು ಸೆಳೆತ ಮತ್ತು ಆಯಾಸ ಹಾಗೂ ಜ್ವರದ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ಸೌಮ್ಯವಾದ ಪ್ರಕರಣಗಳಲ್ಲಿ ಜ್ವರವು ಮೂರು ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಇದು ನ್ಯುಮೋನಿಯಾ ಹಾಗೂ ಕೆಲವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಎದೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.
ಚಿಕಿತ್ಸೆ ಏನು?: ಸಾಮಾನ್ಯವಾಗಿ ಗಿಳಿ ಜ್ವರಕ್ಕೆ ಆಂಟಿಬಯೋಟಿಕ್ಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳು ಹೆಚ್ಚಾದಂತೆ ಔಷಧಗಳೂ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಏಕೆಂದರೆ ರೋಗ ಲಕ್ಷಣಗಳು ತೀವ್ರಗೊಂಡಾಗ ನ್ಯುಮೋನಿಯಾ ಹಾಗೂ ಹೃದಯದ ರಕ್ತನಾಳಗಳ ಉರಿಯೂತ ಕೂಡಾ ಆಗಬಹುದು. ಹೆಪಟೈಟೀಸ್ ಹಾಗೂ ನರಗಳ ಸಮಸ್ಯೆ ಕೂಡ ಎದುರಾಗಬಹುದು. ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗದಿದ್ದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.