ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಇಂದು (ಶುಕ್ರವಾರ) ಎಲ್ಲೆಡೆ ಆಚರಿಸಲಾಗುತ್ತಿದೆ.
ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದೂರ್ವಾಸ ಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮ ದುಃಖಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖಬ್ರಹ್ಮನನ್ನು ಮುಂದಿಟ್ಟುಕೊಂಡು(ಪುರಸ್ಕರಿಸಿ), ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನ ಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).
ಹಬ್ಬದ ಆಚರಣೆ ಹೇಗೆ
ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ
ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ,
ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.
ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ
ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್ ನೈವೇದ್ಯ
ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ
ಮುಗಿದ ನಂತರ ಆಹಾರ ಸೇವಿಸುತ್ತಾರೆ.