ಬೆಂಗಳೂರು: ಸಮಾಜದ ಶಾಂತಿ ಕದಡುವ, ಕೋಮುಗಲಭೆ ಸೃಷ್ಟಿಸುವ ಸಂಘಟನೆ ನಿಷೇಧ ಮಾಡಿದರೆ ತಪ್ಪೇನು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah)ಹೇಳಿದ್ದಾರೆ. ಬಜರಂಗದಳ ನಿಷೇಧಿಸುವ ವಿಚಾರ ಬಗ್ಗೆ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆಗಳಲ್ಲಿ ಭಾಗಿಯಾಗುವ ಸಂಘಟನೆಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.
ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಜನರಿಗೆ ಬೇಕಿರುವುದು ಆಹಾರ, ಉದ್ಯೋಗ, ನೆಮ್ಮದಿಯಿಂದ ಬದುಕುವ ವಾತಾವರಣ. ಇದನ್ನು ಒದಗಿಸಬೇಕಿರುವುದು ಜನರಿಂದ ಆಯ್ಕೆಯಾದ ಸರ್ಕಾರದ ಕರ್ತವ್ಯ. ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಸಮಾಜ ಘಾತುಕರಿಗೆ ನೋವಾಗಬೇಕು, ಬಿಜೆಪಿಗೆ ಯಾಕೆ ಆಗುತ್ತಿದೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷ ಮಂಗಳವಾರ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿತ್ತು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಕಾರ್ಯ ಮಾಡುವುದಾಗಿ ತಿಳಿಸಿತ್ತು. ಇದಕ್ಕೆ ಬಜರಂಗದಳ, ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿವೆ.