ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಜ್ಯೋತಿಷಶಾಸ್ತ್ರದ ಪ್ರಕಾರ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 01:38 ರವರೆಗೆ ರಾಮನವಮಿ ತಿಥಿಯಂದು ಪೂಜೆಗೆ ಮಂಗಳಕರ ಸಮಯ.
ಇದು ಶ್ರೀರಾಮ ಚಂದ್ರನ ಜನ್ಮದಿನ. ಅಂದು, ರಾಮನ ಪೂಜೆ, ಆರಾಧನೆ ಕೈಗೊಂಡವರಿಗೆ ರಾಮನ ವಿಶೇಷ ಕೃಪೆ ದೊರಕುತ್ತದೆ.. ಈ ಬಾರಿ ರಾಮನವಮಿಯನ್ನು ಏಪ್ರಿಲ್ 17 ಬುಧುವಾರದಂದು ಆಚರಿಸಲಾಗುತ್ತದೆ. ರಾಮನವಮಿ ಆಚರಣೆಯ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ರಾಮನವಮಿ 2024 ಮಹೂರ್ತ
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು 2024ರ ಏಪ್ರಿಲ್ 16 ರಂದು ಮಧ್ಯಾಹ್ನ 01:23 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಏಪ್ರಿಲ್ 17 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳುತ್ತದೆ.
ರಾಮನವಮಿ ಪೂಜಾ ಸಮಯ
ರಾಮನವಮಿ ತಿಥಿಯಂದು ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:38 ವರೆಗೆ ಪೂಜೆಗೆ ಶುಭ ಸಮಯ. ಪೂಜಾ ಮಹೂರ್ತ 12:21. ಅಂದರೆ, ಮಧ್ಯಾಹ್ನ 12.21 ಭಗವಾನ್ ಶ್ರೀರಾಮನ ಜನ್ಮ ಸಮಯ.
ಪೌರಾಣಿಕ ಹಿನ್ನೆಲೆ
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ.
ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
ರಾಮನವಮಿಯ ಮಹತ್ವ
ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.
ರಾಮನವಮಿಯ ಆಧ್ಯಾತ್ಮಿಕ ಮಹತ್ವ
ರಾಮ ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ ‘ರಾ’ ಎಂದರೆ ಬೆಳಕು ‘ಮ’ ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.
ದಶರಥ: ಶ್ರೀರಾಮನ ತಂದೆ ದಶರಥ ‘ದಶ’ ಎಂದರೆ ಹತ್ತು, ‘ರಥ’ ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.
ಕೌಸಲ್ಯಾ: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ ‘ಕೌಶಲ್ಯ’ . ಒಬ್ಬ ನುರಿತ ರಥಿಕನು ಹತ್ತು ರಥಗಳನ್ನು ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.
ಆಯೋಧ್ಯೆ: ಶ್ರೀರಾಮನು ಜನಿಸಿದ ಸ್ಥಳ. ‘ಯೋಧ್ಯಾ’ ಎಂದರೆ ಯುದ್ಧ, ‘ಅ’ ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.