ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಿಯಾಮಣಿ ಮದುವೆಯಾದ ಬಳಿಕವೂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಭೇಡಿಕೆ ಕಾಯ್ದುಕೊಂಡಿರುವ ಪ್ರಿಯಾಮಣಿ ಮದುವೆ ಸಂದರ್ಭದಲ್ಲಿ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದರು.
ಪ್ರಿಯಾಮಣಿ ಮದುವೆಯಾಗಿರುವುದು ಮುಸ್ಲಿಂ ಹುಡುಗ ಮುಸ್ತಫಾ ರಾಜ್ ಅವರನ್ನು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಭೇಟಿಯಾದ ಇವರಿಬ್ಬರು ಸ್ನೇಹಿತರಾಗಿ ಪ್ರೇಮಿಗಳಾಗಿ ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಯುವತಿ ಮುಸ್ಲಿಂ ಯುವಕನ್ನು ಮದುವೆಯಾಗುತ್ತಿದ್ದಾರೆ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.
ಇದೀಗ ಪ್ರಿಯಾಮಣಿ ಮದುವೆಯ ನಂತರ ತಾನು ಎದುರಿಸಿದ ಸೈಬರ್ ದಾಳಿಯ ಬಗ್ಗೆ ಮಾತನಾಡಿದ್ದಾರೆ. ತನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು “ಭಯೋತ್ಪಾದಕರು” ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ.
ಮದುವೆ ಘೋಷಣೆಯಾದಾಗಿನಿಂದಲೂ ಪ್ರಾರಂಭವಾದ ಈ ದ್ವೇಷ ಅಭಿಯಾನ ಮದುವೆಯ ನಂತರವೂ ಮುಂದುವರೆಯಿತು ಎಂದು ಪ್ರಿಯಾಮಣಿ ಬೇಸರ ಹೊರ ಹಾಕಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ಸೈಬರ್ ದಾಳಿ ಮುಂದುವರೆದಿದೆ ಎಂದಿದ್ದಾರೆ.
ಮದುವೆ ಘೋಷಣೆಯ ನಂತರ ತನಗೆ ಬಂದ ಪ್ರತಿಕ್ರಿಯೆಯನ್ನು ಪ್ರಿಯಾಮಣಿ ನೆನಪಿಸಿಕೊಂಡರು. ಫೇಸ್ಬುಕ್ನಲ್ಲಿ ನಿಶ್ಚಿತಾರ್ಥವನ್ನು ಘೋಷಿಸುತ್ತಾ ಕುಟುಂಬದ ಸಮ್ಮತಿಯೊಂದಿಗೆ ಜಂಟಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದೆವು. ಬಹಳ ಸಂತೋಷದಿಂದ ಆ ಘೋಷಣೆ ಮಾಡಿದೆವು. ಆದರೆ ನಂತರ ದ್ವೇಷದಿಂದ ತುಂಬಿದ ಕಾಮೆಂಟ್ಗಳು ಬಂದವು. “ಜಿಹಾದಿ, ಮುಸ್ಲಿಂ, ನಿಮ್ಮ ಮಕ್ಕಳು ಭಯೋತ್ಪಾದಕರಾಗಲಿದ್ದಾರೆ” ಎಂದು ಜನರು ಸಂದೇಶ ಕಳುಹಿಸುತ್ತಿದ್ದರು” ಎಂದು ಪ್ರಿಯಾಮಣಿ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಈ ಹೇಳಿಕೆಗಳು ತನ್ನನ್ನು ನಿಜವಾಗಿಯೂ ದುರ್ಬಲಗೊಳಿಸಿದೆ. “ಇದು ನಿರಾಶಾದಾಯಕವಾಗಿತ್ತು. ಅಂತರ್-ಧರ್ಮ ದಂಪತಿಗಳಾದ ನಮ್ಮನ್ನು ಏಕೆ ಗುರಿಯಾಗಿಸಲಾಗುತ್ತಿದೆ? ಜಾತಿ ಮತ್ತು ಧರ್ಮವನ್ನು ಮೀರಿ ಮದುವೆಯಾದ ಅನೇಕ ಪ್ರಮುಖ ತಾರೆಯರಿದ್ದಾರೆ. ಅವರು ಒಂದು ಧರ್ಮವನ್ನು ಮಾತ್ರ ಅನುಸರಿಸಬೇಕು ಅಥವಾ ಸ್ವೀಕರಿಸಬೇಕು ಎಂದೇನಿಲ್ಲ. ಅವರು ಧರ್ಮ ನೋಡದೆ ಪ್ರೀತಿಸಿದರು. ಹಾಗಾದರೆ ಇಂತಹ ವಿಷಯದಲ್ಲಿ ಇಷ್ಟೊಂದು ದ್ವೇಷ ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಪ್ರಿಯಾಮಣಿ ಹೇಳಿದರು.
ಈದ್ ದಿನದಂದು ಶುಭಾಶಯಗಳನ್ನು ಕೋರಿ ಫೋಟೋ ಪೋಸ್ಟ್ ಮಾಡಿದ್ದೆ, ನಂತರ ನಾನು ಇಸ್ಲಾಂಗೆ ಮತಾಂತರಗೊಂಡಿದ್ದೇನೆ ಎಂಬ ಪ್ರಚಾರ ಶುರುವಾಯಿತು. “ನಾನು ಮತಾಂತರಗೊಂಡಿದ್ದೇನೆ ಎಂದು ಅವರಿಗೆ ಹೇಗೆ ತಿಳಿಯುತ್ತದೆ? ನಾನು ಹಿಂದುವಾಗಿ ಜನಿಸಿದೆ, ಯಾವಾಗಲೂ ಆ ನಂಬಿಕೆಯನ್ನು ಪಾಲಿಸುತ್ತೇನೆ, ನಾನು ಮತ್ತು ಮುಸ್ತಾಫ ಪರಸ್ಪರ ನಂಬಿಕೆಗಳನ್ನು ಗೌರವಿಸುತ್ತೇವೆ, ಯಾವುದೇ ಒತ್ತಡವಿಲ್ಲ” ಎಂದು ಪ್ರಿಯಾಮಣಿ ಸ್ಪಷ್ಟಪಡಿಸಿದರು.
“ಈದ್ಗೆ ಪೋಸ್ಟ್ ಮಾಡಿದಾಗ ನಾನು ನವರಾತ್ರಿಗೆ ಏಕೆ ಪೋಸ್ಟ್ ಮಾಡಲಿಲ್ಲ ಎಂದು ಕೆಲವರು ಕೇಳಿದರು. ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿರಲಿಲ್ಲ, ಆದರೆ ಇನ್ನು ಮುಂದೆ ಇದ್ಯಾವುದೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಅಂತಹ ನಕಾರಾತ್ಮಕತೆಗೆ ಗಮನ ಕೊಡಬಾರದು ಎಂದು ನಾನು ನಿರ್ಧರಿಸಿದ್ದೇನೆ” ಎಂದು ಪ್ರಿಯಾಮಣಿ ಹೇಳಿದ್ದಾರೆ.