ಕಳೆದ ಹಲವು ದಿನಗಳಿಂದ ಭಾರತದ ಕುಸ್ತಿಪಟುಗಳು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ಮಂದಿ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದು ಇದೀಗ ಬಹುಭಾಷ ನಟ ಕಿಶೋರ್ ಈ ಕುರಿತು ಸೋಷಿಯಲ್ ಮೀಡಯಾದಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಿಶೋರ್, ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದಿದ್ದು ನಿಜವಾದರೆ, ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ. ಇಂದು ಅವರು ಸೋತರೆ ಭಾರತ ಸೋಲುತ್ತದೆ. ದೇಶದ ಗೌರವ ಹೆಚ್ಚಾಗುವುದು ಬೇರೆ ದೇಶದಲ್ಲೂ ನಮ್ಮ ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ರ್ಯಾಲಿಯ ನಾಟಕಗಳಿಂದಲ್ಲ. ಜೀವ ತೇಯ್ದು ಬೆವರು ಹರಿಸಿ ಈ ಪಟುಗಳು ತಂದ ಮೆಡಲ್ಗಳಿಂದ ಎಂದಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಕ್ರೀಡಾಪಟುಗಳು ಈ ವರ್ಷದ ಜನವರಿಯಲ್ಲಿ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಮಹಿಳಾ ಕ್ರೀಡಾಪಟುಗಳಿಗೆ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದು, ಸಿಂಗ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. ಆದರೆ ಈ ಕುರಿತು ಆರೋಪ ಸಾಭೀತಾದರೆ ನೇಣು ಹಾಕಿಕೊಳ್ಳುವುದಾಗಿ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.