ನಾವು ಬೆಳಿಗ್ಗೆ ಎದ್ದಾಗ ಮಾಡುವ ಒಂದು ಸಣ್ಣ ಕೆಲಸ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದಾಗ ಕೆಲವು ವಿಷಯಗಳನ್ನು ನೋಡುವುದು ಅಶುಭ ಎಂದು ವಾಸ್ತು ಹೇಳುತ್ತದೆ. ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದಾಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ನಮ್ಮಲ್ಲಿ ಎಷ್ಟೇ ನೋವಿದ್ದರೂ ಕೂಡ ಬೆಳಗ್ಗೆ ಮಾಡುವ ಈ ಕೆಲಸಗಳು ಎಲ್ಲಾ ನೋವುಗಳನ್ನು ಮರೆಸುತ್ತದೆ. ಇದರಿಂದ ನೀವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಮುಂಜಾನೆ ಎದ್ದಾಕ್ಷಣ ಯಾವ ಕೆಲಸ ಮಾಡಬೇಕು..? ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಲು ಮುಂಜಾನೆ ಏನು ಮಾಡಬೇಕು..? ಸಂತೋಷದ ಜೀವನಕ್ಕಾಗಿ ಮುಂಜಾನೆ ತಪ್ಪದೇ ಹೀಗೆ ಮಾಡಿ.
ನಿದ್ರೆಯಿಂದ ಎದ್ದಾಗ:
ರಾತ್ರಿ ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಿದ್ದಂತೆಯೇ ಕೂಡಲೇ ಕಣ್ಣುಗಳನ್ನು ತೆರಯದಿರಿ. ಕಣ್ಣು ತೆರೆಯುವ ಮೊದಲು ದಿನ ಪೂರ್ತಿ ಒಳ್ಳೆಯ ಸಂಗತಿ ಸಂಭವಿಸುವುದು, ಒಳ್ಳೆಯ ಸಂಗತಿಯನ್ನು ನೋಡುತ್ತೇನೆ, ಒಳ್ಳೆಯದನ್ನು ಮಾಡುತ್ತೇನೆ ಎನ್ನುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ನಂತರ ಕಣ್ಣುಗಳನ್ನು ತೆರೆಯುತ್ತಾ ಎರಡು ಅಂಗೈಗಳನ್ನು ಜೋಡಿಸಿಕೊಂಡು ಮೊದಲು ದೇವರಿಗೆ ನಮಸ್ಕರಿಸಿ ಅಥವಾ ಪ್ರಾರ್ಥನೆ ಮಾಡಿ. ಆತ್ಮಸ್ಥೈರ್ಯವನ್ನು ತಂದುಕೊಳ್ಳಿ. ಧರ್ಮಗ್ರಂಥಗಳು ಮತ್ತು ಋಷಿಮುನಿಗಳ ಪ್ರಕಾರ, ದೈವಿಕ ಶಕ್ತಿಗಳು ನಮ್ಮ ಅಂಗೈಯಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ.
ಆದ್ದರಿಂದ, ನಮ್ಮ ಬೆಳಿಗ್ಗೆ ಶುಭ ದರ್ಶನ ಮತ್ತು ಶುಭ ಕಾರ್ಯಗಳಿಂದ ಪ್ರಾರಂಭವಾದರೆ, ಇಡೀ ದಿನವೂ ಶುಭವಾಗಿರುತ್ತದೆ. ನಿಮ್ಮ ಮಲಗುವ ಕೋಣೆಯಲ್ಲಿ ನೀವು ಉತ್ತಮ ಚಿತ್ರಗಳನ್ನು ಹಾಕುವುದು ಒಳ್ಳೆಯದು. ವಾತಾವರಣವನ್ನು ಪರಿಮಳಯುಕ್ತವಾಗಿರಿಸಿಕೊಳ್ಳಿ.
ಹಾಸಿಗೆಯಿಂದ ಏಳುವಾಗ:
ಹಾಸಿಗೆಯಿಂದ ಎದ್ದು ಬರುವುದರೊಂದಿಗೆ ನಮ್ಮ ಪ್ರಯಾಣ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಕೆಲವು ಕಾಳಜಿ ಕ್ರಮವನ್ನು ಕೈಗೊಳ್ಳಬೇಕು. ಯಾವ ಕಡೆಯಿಂದ ಶಬ್ದಗಳು ಕೇಳಿ ಬರುತ್ತಿರುತ್ತದೆಯೋ ಆ ಕಡೆಯಿಂದಲೇ ಎದ್ದೇಳಿ. ಎದ್ದ ನಂತರ ಸುಮಾರು ಒಂದು ಗಂಟೆ ಮೌನವಾಗಿರಿ. ಆ ಸಮಯದಲ್ಲಿ ಶೌಚಾಲಯದ ಕೆಲಸವನ್ನು ಮುಗಿಸಿ.
ದೇವರನ್ನು ಪ್ರಾರ್ಥಿಸಿ:
ಮುಂಜಾನೆ ಎದ್ದು ಕೈಕಾಲು ಮತ್ತು ಮುಖವನ್ನು ತೊಳೆದ ನಂತರ ದೇವರಿಗೆ ನಮಸ್ಕರಿಸಿ, ಪ್ರಾರ್ಥನೆ, ಗ್ರಂಥ, ಮಂತ್ರಗಳನ್ನು ಜಪಿಸಿ. ನಕಾರಾತ್ಮಕ ಚಿಂತನೆಯನ್ನು ತೊಡೆದುಹಾಕಿ. ಸಕಾರಾತ್ಮಕ ವಿಷಯ ಹಾಗೂ ವಿಚಾರವನ್ನು ಮನದಲ್ಲಿ ತುಂಬಿಕೊಳ್ಳಬೇಕು.
ಹೀಗೆ ಮಾಡಬಾರದು:
ಮುಂಜಾನೆ ದೇವರ ಪ್ರಾರ್ಥನೆ ಮುಗಿಸಿ ಧನಾತ್ಮಕ ಚಿಂತನೆ ಮಾಡಿದ ನಂತರ ಕೆಟ್ಟ ಸಂಗತಿಗಳ ಕಡೆಗೆ ಹೆಚ್ಚು ಆಕರ್ಷಿತರಾಗಬಾರದು. ಟಿವಿಯಲ್ಲಿ ಅಥವಾ ಇತರ ವ್ಯಕ್ತಿಗಳಿಂದ ಕೆಟ್ಟ ಸುದ್ದಿ ಅಥವಾ ಋಣಾತ್ಮಕ ಭಾವನೆಯನ್ನು ಪ್ರಚೋದಿಸುವ ಕೆಲಸವನ್ನು ಮಾಡಬಾರದು. ವಿಶೇಷವಾಗಿ ಕೋತಿ, ಹಂದಿ, ನಾಯಿಯ ಹೆಸರನ್ನು ಜಪಿಸುವುದು ಅಥವಾ ಅವುಗಳ ಹೆಸರನ್ನು ಹೇಳುವುದು ಮಾಡಬಾರದು.
ದೇವರ ಪ್ರಾರ್ಥನೆ ಧ್ಯಾನ ಮುಗಿಸಿದ ಬಳಿಕ ಯೋಗ, ನಡಿಗೆ, ಏರೋಬಿಕ್ಸ್ ಸೇರಿದಂತೆ ಇನ್ನಿತರ ವ್ಯಾಯಾಮವನ್ನು ಕನಿಷ್ಟ 15-30 ನಿಮಿಷಗಳ ಕಾಲ ಮಾಡಬೇಕು. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸುಧಾರಣೆ ಆಗುವುದು. ಜೊತೆಗೆ ಧನಾತ್ಮಕ ಚಿಂತನೆಗಳ ಬಗ್ಗೆ ಹೆಚ್ಚು ಒಲವು ತೋರಬೇಕು.
ಆರೋಗ್ಯಕರ ಆಹಾರ:
ಮುಂಜಾನೆ ಮಾನಸಿಕವಾಗಿ ಆರೋಗ್ಯಕರ ಚಿಂತನೆ ನಡೆಸುವಂತೆಯೇ ಆರೋಗ್ಯಕರ ಆಹಾರವನ್ನು ಸೇವಿಸುವುದರ ಮೂಲಕ ದಿನದ ಪ್ರಾರಂಭ ಮಾಡಬೇಕು. ಆಗ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ದೈವ ಶಕ್ತಿಯ ಆಶೀರ್ವಾದದಿಂದ ಜೀವನ ಪೂರ್ತಿ ಸಂತೋಷದಿಂದ ಇರಬಹುದು.