ಬೆಂಗಳೂರು: ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ಬೆಳಗಾವಿಯ ಖಾನಾಪುರ ತಾಲೂಕಿನ ಯುವಕ ಆತ್ಮಹತ್ಯೆಗೆ ಶರಣಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಹಂಚಿಕೊಂಡು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಅನ್ನಭಾಗ್ಯ, ಗೃಹಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳು ಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ ಸಿದ್ದರಾಮಯ್ಯ ನವರೇ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
https://x.com/hd_kumaraswamy/status/1754445799772360888?t=GQe3ZG2qKPNn28Oxlz_5Yg&s=08
ಗ್ಯಾರಂಟಿಗಳ ಮೂಲಕವೇ ಗತಿಗೆಟ್ಟ ಕಾಂಗ್ರೆಸ್ ಪಕ್ಷದ ಹೊಟ್ಟೆ ಹೊರೆಯುತ್ತಿರುವ ಮತಿಗೆಟ್ಟ ನಿಮ್ಮ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ಕಪಟ ಪೋಷಾಕಿನಿಂದ ಮೆರೆಯುತ್ತಿದೆ. ಆ ಪೋಷಾಕು, ನಿಮ್ಮ ಢೋಂಗಿಧೀರತ್ವದ ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದ್ದಾರೆ.
ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರ್ಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು ಎಂದಿದ್ದಾರೆ