ಕೋಲ್ಕತಾ: 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿರುವ ಕಡೆ ನಮ್ಮ ಪಕ್ಷ ದೇಶದ ಅತ್ಯಂತ ಹಳೆಯ ಪಕ್ಷವನ್ನು ಬೆಂಬಲಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee)ಅವರು ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟಿನ ಸಂಭಾವ್ಯ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಟಿಎಂಸಿಯ ನಿಲುವನ್ನು ಮಮತಾ ಬ್ಯಾನರ್ಜಿ ಮೊದಲ ಬಾರಿ ಸ್ಪಷ್ಟಪಡಿಸಿದ್ದಾರೆ.
“ಕಾಂಗ್ರೆಸ್ ಎಲ್ಲೆಲ್ಲಿ ಪ್ರಬಲವಾಗಿದೆಯೋ ಅಲ್ಲಿ ಅವರು ಹೋರಾಡಲಿ. ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರು ಇತರ ರಾಜಕೀಯ ಪಕ್ಷಗಳನ್ನು ಸಹ ಬೆಂಬಲಿಸಬೇಕು” ಎಂದು ಮಮಾತ ಬ್ಯಾನರ್ಜಿ ಸುದ್ದಿಗಾರರಿಗೆ ಹೇಳಿದ್ದಾರೆ. ಆದರೆ, ಪ್ರಾದೇಶಿಕ ಬೆಂಬಲ ಪಡೆಯಲು ಕಾಂಗ್ರೆಸ್ ಕೂಡ ಇತರ ಪಕ್ಷಗಳಿಗೆ ಬೆಂಬಲ ನೀಡಬೇಕು ಮತ್ತು ಬಲಿಷ್ಠ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.