ಬೆಂಗಳೂರು: ನಾವು ಕಂಡ ಕಂಡಲ್ಲಿ ಕುಳಿತು ಆಹಾರ ಸೇವನೆ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಮುಂದೆ ಕುಳಿತು ಆಹಾರ ಸೇವನೆ ಮಾಡುವುದು ಹೆಚ್ಚು. ಆದ್ರೆ ವಾಸ್ತುಶಾಸ್ತ್ರದ ಪ್ರಕಾರ, ಆಹಾರ ಸೇವನೆಯನ್ನು ಎಲ್ಲೆಂದರಲ್ಲಿ ಮಾಡಬಾರದು. ಅದಕ್ಕೂ ದಿಕ್ಕು,ವಾಸ್ತವಿದೆ. ಆಹಾರ ಸೇವಿಸುವಾಗ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ನಾವಿಂದು ಹೇಳ್ತೆವೆ. ಆಹಾರ ಸೇವಿಸುವಾಗ ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ. ಇದು ಆರೋಗ್ಯ ವೃದ್ಧಿಗೂ ಕಾರಣವಾಗುತ್ತದೆ.
ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಶುಭ ?
- ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಎರಡೂ ದಿಕ್ಕನ್ನು ದೇವರ ವಾಸಸ್ಥಾನವೆಂದು ನಂಬಲಾಗಿದೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಆಹಾರ ತಿನ್ನುವುದರಿಂದ ದೇವರ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ಆಯುಷ್ಯ ವೃದ್ಧಿಯಾಗುತ್ತದೆ. ಹಾಗೆಯೇ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಶಕ್ತಿ ಹೆಚ್ಚುತ್ತದೆ. ರೋಗ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
- ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದಕ್ಷಿಣಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬಾರದು. ಇದು ದುರದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ.
- ಮನೆಗೆ ಬರುವ ಅತಿಥಿಗಳಿಗೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಊಟ ಬಡಿಸಬೇಕು. ಅವರು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
- ಡೈನಿಂಗ್ ಟೇಬಲ್ ಅನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಕಡೆಗೆ ಇಡಬೇಕು.
- ವಾಸ್ತು ಶಾಸ್ತ್ರದ ಪ್ರಕಾರ, ಒದ್ದೆಯಾದ ಕಾಲಗಳಲ್ಲಿ ಆಹಾರ ಸೇವಿಸಲು ಕುಳಿತುಕೊಳ್ಳಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.ಆಯಸ್ಸನ್ನು ಹೆಚ್ಚಿಸಲು ಇದು ಸಹಕಾರಿ.
- ಒಡೆದ ಹಾಗೂ ಕೊಳಕಾದ ಪಾತ್ರೆಗಳಲ್ಲಿ ಆಹಾರವನ್ನು ತಿನ್ನಬಾರದು. ಅದು ದುರದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
- ಹಾಸಿಗೆಯ ಮೇಲೆ ಕೂತು ಊಟ ಸೇವನೆ ಮಾಡಬಾರದು. ಇದು ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.
- ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ತಿನ್ನಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.
- ಯಾವಾಗಲೂ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಶಾಸ್ತ್ರದ ಪ್ರಕಾರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಕಾಲುಗಳನ್ನು ಮಡಚಿ ಆಹಾರ ಸೇವಿಸಬೇಕು. ಆಹಾರದ ತಟ್ಟೆಯನ್ನು ನಿಮ್ಮ ಕಾಲ ಬಳಿ ಇಡಬಾರದು. ಅದನ್ನು ಕಾಲಿನಿಂದ ಸ್ವಲ್ಪ ಮೇಲ್ಭಾಗದಲ್ಲಿ ಇಡಬೇಕು. ಆಗ ಅನ್ನಪೂರ್ಣೆಗೆ ಗೌರವಿಸಿದಂತಾಗುತ್ತದೆ. ಎಂದಿಗೂ ನಿಮಗೆ ಆಹಾರದ ಕೊರತೆ ಕಾಡುವುದಿಲ್ಲ.
- ಆಹಾರವನ್ನು ಸೇವಿಸಿದ ನಂತರ ಕೈ ತೊಳೆದು ಹಾಗೆಯೇ ಹೊರಗೆ ಹೋಗ್ತೇವೆ. ಅದು ಒಳ್ಳೆಯ ಅಭ್ಯಾಸವಲ್ಲ. ಎಲ್ಲಾ ಪಾತ್ರೆಗಳನ್ನು ಡೈನಿಂಗ್ ಟೇಬಲ್ನಿಂದ ತೆಗೆಯಬೇಕು. ಟೇಬಲ್ ಅಥವಾ ನೀವು ಆಹಾರ ಸೇವನೆ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಬೇಕು.
- ಡೈನಿಂಗ್ ಟೇಬಲ್ ಮೇಲೆ ಯಾವಾಗಲೂ ಕೆಲವು ಆಹಾರ ಪದಾರ್ಥಗಳನ್ನು ಇಟ್ಟಿರಬೇಕು. ಹಾಗಾದಲ್ಲಿ ಎಂದಿಗೂ ಆಹಾರದ ಕೊರತೆ ಕಾಡುವುದಿಲ್ಲವೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
- ತಿನ್ನುವ ಮೊದಲು ಯಾವಾಗಲೂ ದೇವರಿಗೆ ಅನ್ನವನ್ನು ಅರ್ಪಿಸಬೇಕು. ಊಟ ಮಾಡುವಾಗ ಮಾತನಾಡಬಾರದು. ಹಾಗೆಯೇ ಯಾವುದೇ ಕೆಲಸವನ್ನು ಮಾಡಬಾರದು.