ಸಾಮಾಜಿಕ, ಶೈಕ್ಷಣಿಕ, ಜಾತಿವಾರು ಸಮೀಕ್ಷೆಯ ಕಾಂತರಾಜು ವರದಿಯನ್ನು ಸ್ವೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಿಎಂ ಈ ನಿರ್ಧಾರದ ಬಳಿಕ ಸಿದ್ದರಾಮಯ್ಯ ಸಚಿವ ಸಂಪುಟದಲ್ಲೇ ಭಾರೀ ಲೆಕ್ಕಾಚಾರಗಳು ಶುರುವಾಗಿದೆ.
ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಕಾಂತರಾಜು ವರದಿಯನ್ನು ಕ್ಯಾಬಿನೆಟ್ನಲ್ಲಿ ಮಂಡಿಸಿ, ಚರ್ಚಿಸುವುದಾಗಿ ಸ್ಪಷ್ಟಪಡಿಸಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಕಾಂತರಾಜು ವರದಿಯನ್ನು ಸ್ವೀಕರಿಸಿದರೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದರ ಲೆಕ್ಕಾಚಾರಗಳು ನಡೀತಿದೆ. ಕಾಂಗ್ರೆಸ್ ನಾಯಕರು ಗಂಭೀರವಾಗಿ ಚಿಂತನೆ ನಡೆಸಿದ್ದು, ಕಾಂತರಾಜು ವರದಿಯ ಪರ ಯಾರು, ವಿರೋಧ ಯಾರು, ತಟಸ್ಥ ಯಾರು? ಅನ್ನೋದು ಬಹುಮುಖ್ಯವಾಗಿದೆ.
ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಸದ್ಯ ಅತಿಹೆಚ್ಚು ಅಹಿಂದ ಸಮುದಾಯದ ಸಚಿವರಿದ್ದಾರೆ. ಅವರೆಲ್ಲರೂ ಕಾಂತರಾಜು ವರದಿ ಸ್ವೀಕಾರದ ಪರ ಇದ್ದರೆ, ಲಿಂಗಾಯತ-ಒಕ್ಕಲಿಗ 11 ಸಚಿವರು ವಿರೋಧಿಸುವ ಸಾಧ್ಯತೆ ಇದೆ. ತಟಸ್ಥವಾಗಿ 3 ಸಚಿವರು ಇದ್ದಾರೆ ಎನ್ನಲಾಗಿದೆ. ಆದರೆ, ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಹುತೇಕ ಅಹಿಂದ ಸಚಿವರ ಬೆಂಬಲವಿದ್ದು, ಅಹಿಂದ ಅಸ್ತ್ರ ಪ್ರಮುಖವಾಗಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂತರಾಜು ವರದಿ ಸ್ವೀಕರಿಸಿ ಅಹಿಂದ ಮತಗಳ ಕ್ರೋಢೀಕರಣಕ್ಕೆ ಸಿಎಂ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ. ವರದಿ ಸ್ವೀಕರಿಸಿ ಜನ ಸಾಮಾನ್ಯರ ಚರ್ಚೆಗೆ ಬಿಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಲೋಕಸಭಾ ಕದನದಲ್ಲಿ ಅಹಿಂದ vs ಒಕ್ಕಲಿಗ+ಲಿಂಗಾಯತ ಫೈಟ್ಗೆ ವೇದಿಕೆ ಸಿದ್ಧವಾಗುತ್ತಿದೆ.