ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ವಿ ನಾಯಕರ ಸಾಲಿನಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೂ ಅವರು 2021ರ ಐಪಿಎಲ್ ಟೂರ್ನಿಯ ಬಳಿಕ ಆರ್ಸಿಬಿ ನಾಯಕತ್ವವನ್ನು ತೊರೆದಿದ್ದರು. ಇದೀಗ ಈ ಬಗ್ಗೆ ಆರ್ಸಿಬಿ ಮಾಜಿ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ.
2013ರ ಐಪಿಎಲ್ ಟೂರ್ನಿಯಲ್ಲಿ ಡೇನಿಯಲ್ ವೆಟ್ಟೋರಿ ಆರ್ಸಿಬಿ ನಾಯಕತ್ವ ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ತಂಡಕ್ಕೆ ನೂತನ ಸಾರಥಿಯಾಗಿದ್ದರು. 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ಥ ಕೊಹ್ಲಿ, 66ರಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 2021ರ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಹಾಗೂ ಆರ್ಸಿಬಿ ನಾಯಕತ್ವ ತೊರೆದಿದ್ದರು. ನಾಯಕತ್ವ ತ್ಯಜಿಸಿದ್ದರಿಂದ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಸ್ಫೋಟಕ ಆಟ ಹೊರಬರಲು ಸಾಧ್ಯವಾಯಿತು ಎಂದು ಎಬಿ ಡಿ ವಿಲಿಯರ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿಯ ಮೊದಲನೇ ಪಂದ್ಯದಲ್ಲ ವಿರಾಟ್ ಕೊಹ್ಲಿ ಕೇವಲ 49 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚುವ ಮೂಲಕ ತಂಡಕ್ಕೆ 8 ವಿಕೆಟ್ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ವಿರಾಟ್ ಕೊಹ್ಲಿಯ ಈ ಮಾಸ್ಟರ್ ಕ್ಲಾಸ್ ಇನಿಂಗ್ಸ್ ಬಗ್ಗೆ ಜಿಯೋ ಸಿನಿಮಾದೊಂದಿಗೆ ಎಬಿ ಡಿ ವಿಲಿಯರ್ಸ್ ಮೆಚ್ಚುಗೆ ವ್ಯಕ್ತಪಡಿಸಿದರು.
“ನಾನು ವಿರಾಟ್ ಕೊಹ್ಲಿಯ ಬ್ಯಾಟಿಂಗ್ನಲ್ಲಿ ಹೆಚ್ಚಿನ ಬದಲಾವಣೆಯನ್ನು ಗುರುತಿಸಿಲ್ಲ. ಅವರು ತಾಂತ್ರಿಕವಾಗಿ ಬಲಿಷ್ಠವಾಗಿದ್ದಾರೆ. ವಿಕೆಟ್ಗಳ ನಡುವೆ ಸಕ್ರಿಯರಾಗಿದ್ದಾರೆ. ಈ ಆವೃತ್ತಿಯಲ್ಲಿ ಅವರು ಸಾಕಷ್ಟು ಲವಲವಿಕೆಯಿಂದ ಇರುವುದು ಗೋಚರಿಸುತ್ತಿದೆ. ಕೆಲವು ಸಂದರ್ಶನಗಳಲ್ಲೂ ಕೂಡ ಅವರು ಹಿಂದಿಗಿಂತಲೂ ಹೆಚ್ಚು ಸಂತೋಷವಾಗಿ ಮಾತನಾಡುವುದನ್ನು ಗಮನಿಸಿದ್ದೇನೆ,” ಎಂದು ಎಬಿಡಿ ತಿಳಿಸಿದ್ದಾರೆ.
Covid Rules: RCB ಅಭಿಮಾನಿಗಳಿಗೆ ಬಿಗ್ ಶಾಕ್: ಕೋವಿಡ್ ನಿಯಮ ಜಾರಿ ಸಾಧ್ಯತೆ
ನಾಯಕತ್ವ ತ್ಯಜಿಸಿದ್ದು ಒತ್ತಡ ತಗ್ಗಿಸಿದೆ
“ನಾಯಕತ್ವ ತ್ಯಜಿಸಿದ್ದು ಹಾಗೂ 2022ರ ಐಪಿಎಲ್ ಟೂರ್ನಿಯ ಬಳಿಕ ಸ್ವಲ್ಪ ಕಾಲ ಕ್ರಿಕೆಟ್ ಜೀವನದಿಂದ ವಿಶ್ರಾಂತಿ ಪಡೆದದ್ದು, ಕೊಹ್ಲಿಯ ಆಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗಿದೆ. ಆದ್ದರಿಂದಲೇ ಅವರ ಬ್ಯಾಟ್ನಿಂದ ಸ್ಫೋಟಕ ಇನಿಂಗ್ಸ್ ಮೂಡಿಬರುತ್ತಿದೆ. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಸುದೀರ್ಘ ಕಾಲದವರೆಗೂ ತಂಡಗಳನ್ನು ಮುನ್ನಡೆಸಿದ್ದರು, ಆದ್ದರಿಂದಲೇ ಅವರು ಸಹಜವಾಗಿ ಒತ್ತಡಕ್ಕೆ ಸಿಲುಕಿದ್ದರು,” ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿಯ ಯಶಸ್ಸಿಗೆ ಇದು ಕೂಡ ಒಂದು ಕಾರಣವಾಗಿರಬಹುದು. ಒತ್ತಡವನ್ನು ಮರೆತು ಸದಾ ನಗು ನಗುತ್ತೀರಿ, ಅದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉತ್ತಮ ಇನಿಂಗ್ಸ್ ಆಡಲು ಸಹಕಾರಿ ಆಗುತ್ತದೆ,” ಎಂದು ವಿರಾಟ್ ಕೊಹ್ಲಿಗೆ ಎಬಿಡಿ ಸಲಹೆ ನೀಡಿದ್ದಾರೆ.
“ಯಾವಾಗ ನೀವು ಸಂತಸದಲ್ಲಿರುತ್ತಿರೋ ಆಗ ನಿಮ್ಮಲ್ಲಿರುವ ನೈಜ ಆಟ ಹೊರ ಬರುತ್ತದೆ. ತಮ್ಮ ಮೊದಲ ಇನಿಂಗ್ಸ್ನಂತೆ ಸುಲಭವಾಗಿ ರನ್ ಗಳಿಸಲು ಸಾಧ್ಯವಾಗುತ್ತದೆ. ಅವರ ಬ್ಯಾಟ್ನಿಂದ ಇನ್ನು ಉತ್ತಮ ಇನಿಂಗ್ಸ್ಗಳು ಮೂಡಿ ಬರಲಿವೆ. ಮುಂದಿನ ಪಂದ್ಯಗಳಲ್ಲಿ ಹಲವು ಸ್ಫೋಟಕ ಇನಿಂಗ್ಸ್ಗಳನ್ನು ನೋಡಬಹುದು,” ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಭವಿಷ್ಯ ನುಡಿದಿದ್ದಾರೆ.