ಕರ್ನಾಟಕ ತಂಡ ಇನ್ನು ಕನಿಷ್ಠ ಐದಾರು ವರ್ಷ ರಣಜಿ ಟ್ರೋಫಿ ಗೆಲ್ಲುವುದಿಲ್ಲ. ದೊಡ್ಡ ಟೂರ್ನಮೆಂಟ್ ಗೆಲ್ಲಿಸುವ ಆಟಗಾರರು ತಂಡದಲ್ಲಿದ್ದರೆ ತಾನೇ ರಣಜಿ ಟ್ರೋಫಿ ಗೆಲ್ಲುವ ಮಾತು ಎಂದು ಊಹಿಸಬಹುದು. ಸದ್ಯ 2013ಕ್ಕೂ ಮುನ್ನ ಕರ್ನಾಟಕ ತಂಡ 14 ವರ್ಷಗಳಿಂದ ರಣಜಿ ಟ್ರೋಫಿ ಗೆದ್ದಿರಲಿಲ್ಲ.
ಆ ಕೊರಗು ನೀಗಿಸಿದ್ದು ದಾವಣಗೆರೆ ಎಕ್ಸ್ಪ್ರೆಸ್ ಆರ್.ವಿನಯ್ ಕುಮಾರ್ ನಾಯಕತ್ವದ ಆ ಐತಿಹಾಸಿಕ ತಂಡ.
ವಿನಯ್ ಕುಮಾರ್ ನೇತೃತ್ವದ ಅನುಭವಿಗಳು ಮತ್ತು ಬಿಸಿರಕ್ತದ ಯುವಪಡೆಯ ಮಿಶ್ರಣದಿಂದ ಕೂಡಿದ್ದ ಅದ್ಭುತ ತಂಡವದು. ಆ ಕಾಲಕ್ಕೆ ಇಡೀ ಭಾರತ ಪೂರ್ಣ ಸಾಮರ್ಥ್ಯದೊಂದಿಗೆ ಬಂದು ಆಡಿದರೂ ಹೊಡೆದು ಹಾಕುವಷ್ಟರ ಮಟ್ಟಿಗಿನ ತಾಕತ್ತು ಕರ್ನಾಟಕ ತಂಡಕ್ಕಿತ್ತು.
ಆರ್.ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಗಣೇಶ್ ಸತೀಶ್, ಅಮಿತ್ ವರ್ಮಾ, ಸಿ.ಎಂ ಗೌತಮ್ರಂಥಹ ಅನುಭವಿಗಳ ಜೊತೆ ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್, ಎಚ್.ಎಸ್ ಶರತ್ರಂತಹ ಹೊಸ ಹುಡುಗರು ತಂಡದಲ್ಲಿದ್ದರು. ಎಲ್ಲರೂ ಮ್ಯಾಚ್ ವಿನ್ನರ್ಗಲೇ.
2013-14 ಮತ್ತು 2014-15ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದಲ್ಲಿದ್ದ ಆಟಗಾರರ ಪೈಕಿ ಈಗ ತಂಡದಲ್ಲಿ ಉಳಿದುಕೊಂಡಿರುವುದು ಎಷ್ಟು ಮಂದಿ ಗೊತ್ತಾ? ಕೇವಲ ಇಬ್ಬರು..ಒಬ್ಬ ಮನೀಶ್ ಪಾಂಡೆ, ಮತ್ತೊಬ್ಬ ಮಯಾಂಕ್ ಅಗರ್ವಾಲ್.
ಅಂದಿನ ಆ ಐತಿಹಾಸಿಕ ತಂಡದಲ್ಲಿದ್ದವರಲ್ಲಿ ಏಳು ಮಂದಿ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಅದು ನಾಯಕ ಆರ್.ವಿನಯ್ ಕುಮಾರ್ ಅವರಿಂದ ಹಿಡಿದು ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್ ವರೆಗೆ.. ಮುಂದಿನ ಸರದಿ ಮನೀಶ್ ಪಾಂಡೆಯದ್ದಾದರೂ ಅಚ್ಚರಿ ಪಡುವಂಥದ್ದು ಏನೂ ಇಲ್ಲ.
ಹಳೆ ನೀರು ಕೊಚ್ಚಿ ಹೋದಂತೆ ಹೊಸ ನೀರು ಬರಲೇಬೇಕು. ಹಳಬರು ತೆರೆಮರೆಗೆ ಸರಿದಷ್ಟೂ ಹೊಸಬರಿಗೆ ಅವಕಾಶಗಳು ಸಿಗುತ್ತವೆ ಎಂಬುದೂ ಸತ್ಯ. ಹಾಗಂತ ತಂಡದ ಆಧಾರಸ್ಥಂಭಗಳೇ ಕುಸಿದರೆ. ಆ ತಂಡ ದೊಡ್ಡ ದೊಡ್ಡ ಟ್ರೋಫಿಗಳನ್ನು ಗೆಲ್ಲುವುದಾದರೂ ಹೇಗೆ(?)