ಬೆಂಗಳೂರು: ಪಕ್ಷದ 13 ಸಂಸದರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದ್ದರೂ ಬಿಜೆಪಿ ನಾಯಕರ ಮೌನವೇಕೆ? ಎಂದು ಬಿಜೆಪಿ ಮುಖಂಡ ಸದಾನಂದಗೌಡ ಬೇಸರ ಹೊರ ಹಾಕಿದ್ದಾರೆ.
ಬೆಂಗಳೂರಿನ ವಿವಿ ಟವರ್ ನಲ್ಲಿರುವ ಕಚೇರಿಯಲ್ಲಿ ಮಾತನಾಡಿದ ಅವರು, 13 ಮಂದಿ ಬಿಜೆಪಿ ಸಂಸದರ ಮಾನಹಾನಿ ಆಗುತ್ತಿರುವುದು ನೋಡಿಯೂ ಸ್ಪಷ್ಟನೆ ನೀಡದಿರುವುದು ತರವಲ್ಲ. ಇದು ರಾಜ್ಯಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ.
ಆಗುತ್ತಿರುವ ಗೊಂದಲಕ್ಕೆ ಕೂಡಲೇ ಪರಿಹರಿಸುವ ಕೆಲಸವನ್ನು ಸಂಬಂಧಪಟ್ಟ ನಾಯಕರು ಮಾಡಬೇಕಿದೆ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಆಯ್ಕೆಯಾಗಿರುವ 25 ಬಿಜೆಪಿ ಸಂಸದರ ಪೈಕಿ 13 ಮಂದಿ ನಾಲಾಯಕ್ ಸಂಸದರು ಎಂದು ತೇಜೋವಧೆ ಮಾಡುವ ಕೆಲಸವಾಗುತ್ತಿದೆ.
ಈ ಮೂಲಕ ಹಿರಿಯ ಸಂಸದರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗುತ್ತಿದೆ. ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.