ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ತಣ್ಣನೆಯ ರಾತ್ರಿ. ಆದರೆ ಎಲ್ಲರ ಕಣ್ಣಲ್ಲೂ ಕೋಡಿಯಾಗಿ ಹರಿಯುತ್ತಿದೆ ಬಿಸಿಯಾದ ಕಂಬನಿ. ಎದುರಲ್ಲಿ ಅಗ್ಗಷ್ಟಿಗೆ ಧಗಧಗ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಕರಗಿ ಕಣ್ಣೀರಾಗಿ ಹರಿಯುತ್ತಿದ್ದಾರೆ. ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು, ಈಡೇರದೇ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ, ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿವೆಯಲ್ಲ ಎಷ್ಟೊಂದು ಕತೆ.
ಮನುಷ್ಯ ಮನುಷ್ಯರ ನಡುವಿನ ಗೋಡೆ ಒಡೆಯಲು ನೋವಿಗಿಂತ ಬೇರೆ ಆಯುಧ ಬೇಕೆ? ಅಗ್ಗಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ವರೆಸಿದ್ದಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಹೆಗಲಾಗಿದ್ದಾರೆ. ಒಬ್ಬರಿಗೊಬ್ಬರು ಒದಗಿಬರುತ್ತ ಎಲ್ಲರೂ ಒಂದೇ ಆಗಿದ್ದಾರೆ.
ಈ ಎಲ್ಲ ಭಾವುಕ ಕ್ಷಣಗಳನ್ನು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿವೆ. ಆದರೆ ಎಷ್ಟು ಕಾಲ? ಎಲ್ಲಿಯವರೆಗೆ? ಬಿಗ್ ಬಾಸ್ ಮನೆಯೊಳಗಿನ ಪ್ರತಿ ಗಳಿಗೆಯೂ ವ್ಯಕ್ತಿತ್ವ ಪರೀಕ್ಷೆಯ ಅಗ್ನಿದಿವ್ಯವೇ.. ಈ ಆಟದಲ್ಲಿ ಒಂದಾಗಿರುವವರು ಮತ್ತೆ ಬೇರಾಗುತ್ತಾರಾ? ಪರಸ್ಪರ ಹೆಗಲುಕೊಟ್ಟವರು ತೊಡೆ ತಟ್ಟಿ ನಿಲ್ಲುತ್ತಾರಾ? ಕಾದು ನೋಡಬೇಕು.
ಅದರಲ್ಲೂ ತಾರಾ (Tara) ಅವರು ಮನೆಗೆ ಬಂದಾದ ಮೇಲೆ ಭಾವುಕ ಕ್ಷಣಗಳನ್ನೂ ಇನ್ನೂ ಹೆಚ್ಚಾಗಿ ಡ್ರೋನ್ ಪ್ರತಾಪ್ (Drone Pratap) ಸೇರಿದಂತೆ ಹಲವರು ತಮ್ಮ ನೋವುಗಳನ್ನು ತೋಡಿಕೊಂಡು ಭಾವುಕರಾಗಿದ್ದಾರೆ. ಮನೆಯ ಸಂಕಟಗಳನ್ನು ತಾರಾ ಜೊತೆಗೇ ಹಲವರು ಹಂಚಿಕೊಂಡಿದ್ದಾರೆ.