2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಅಧಿಕಾರಯುತ ಪ್ರದರ್ಶನ ನೀಡಿದ್ದರೂ, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದಿದ್ದ 2019ರ ವಿಶ್ವಕಪ್ ಟೂರ್ನಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿದು ರೌಂಡ್ ರಾಬಿನ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲಿ 7 ಜಯ ದಾಖಲಿಸಿತ್ತು. ಲೀಗ್ ಹಂತದಲ್ಲಿ ಇಂಗ್ಲೆಂಡ್ ಎದುರು 35 ರನ್ಗಳಿಂದ ಸೋತರೆ, ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯ ಮಳೆ ಕಾರಣ ರದ್ದಾಗಿತ್ತು. ಇನ್ನುಳಿದ 7 ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಸೆಮಿಫೈನಲ್ಗೆ ದಾಪುಗಾಲಿಟ್ಟಿತ್ತು.
ನ್ಯೂಜಿಲೆಂಡ್ ಎದುರು ಮ್ಯಾಂಚೆಸ್ಟರ್ನಲ್ಲಿ ಮಳೆ ಕಾರಣ ಜುಲೈ 9 ಮತ್ತು 10ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಅಚ್ಚರಿಯ ಸೋಲುಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ನ್ಯೂಜಿಲೆಂಡ್ ತಂಡವನ್ನು ಕೇವಲ 239/8 ರನ್ಗಳಿಗೆ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ, ಮಳೆ ಕಾರಣ ಭಾರತದ ಇನಿಂಗ್ಸ್ನ ಮರುದಿನಕ್ಕೆ ಮುಂದೂಡಿದ್ದೇ ಟೀಮ್ ಇಂಡಿಯಾಗೆ ಎದುರಾದ ಬಹುದೊಡ್ಡ ಕಂಟಕವಾಯಿತು.ಮಳೆಯಾದ ಕಾರಣ ಪಿಚ್ ಸ್ವರೂಪದಲ್ಲಿ ಬದಲಾವಣೆಯಾಗಿ ವೇಗದ ಬೌಲರ್ಗಳಿಗೆ ಸ್ವರ್ಗತಾಣವಾಯಿತು. ಕಿವೀಸ್ ವೇಗಿಗಳ ಎದುರು ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ಮರ್ಮಾಘಾತ ಅನುಭವಿಸಿ 24 ರನ್ ಗಳಿಸುವ ಹೊತ್ತಿಗೆ 4 ವಿಕೆಟ್ ಕೈಚೆಲ್ಲಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಹೋರಾಟದ ನಡುವೆಯೂ ಭಾರತ ತಂಡ 49.3 ಓವರ್ಗಳಲ್ಲಿ 221 ರನ್ಗಳಿಗೆ ಆಲ್ಔಟ್ ಆಗಿ 18 ರನ್ಗಳ ಸೋಲುಂಡು ವಿಶ್ವಕಪ್ ರೇಸ್ನಿಂದ ಹೊರಬಿದ್ದಿತ್ತು.