ನವದೆಹಲಿ: ದೀಪಾವಳಿಗೆ (Deepavali) ಭಾರತದ ಕಂಪನಿಗಳು (India Companies) ಉದ್ಯೋಗಿಗಳಿಗೆ ಯಾಕೆ ದೀರ್ಘ ರಜೆ (Longer Festive Break) ನೀಡುವುದಿಲ್ಲ ಎಂದು ಎಡೆಲ್ವೀಸ್ (Edelweiss) ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ (Radhika Gupta) ಪ್ರಶ್ನೆ ಮಾಡಿದ್ದಾರೆ. ನಾನು ಪಾಶ್ಚಿಮಾತ್ಯ ದೇಶದಲ್ಲಿ ವಾಸಿಸುತ್ತಿದ್ದ ಎಲ್ಲಾ ವರ್ಷಗಳಲ್ಲಿ ರಜಾದಿನವು ದೀರ್ಘ ಮತ್ತು ವಿಸ್ತರಿಸಲ್ಪಟ್ಟಿತ್ತು. ಕ್ರಿಸ್ಮಸ್ (Christmas) ಡಿಸೆಂಬರ್ 15ರ ನಂತರ ಪ್ರಾರಂಭವಾದರೆ ಹೊಸ ವರ್ಷದವರೆಗೆ ಅದು ಮುಂದುವರೆಯುತ್ತಿತ್ತು. ಚೀನೀ ಹೊಸ ವರ್ಷವು ದೀರ್ಘ ರಜಾದಿನವನ್ನು ಹೊಂದಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುರದೃಷ್ಟವಶಾತ್ ಭಾರತ (India) ಕಾರ್ಪೊರೇಟ್ ಕಚೇರಿಗಳಲ್ಲಿ ದೀಪಾವಳಿ ರಜಾದಿನಗಳು ಸಾಮಾನ್ಯವಾಗಿ 1 ಅಥವಾ 2 ದಿನಗಳು ಮಾತ್ರ ಇದೆ. ಅದರಲ್ಲೂ ವಾರಾಂತ್ಯದಲ್ಲಿ ದೀಪಾವಳಿ ಬಂದಾಗ ಒಂದು ದಿನ ಮಾತ್ರ ರಜೆ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ನಮ್ಮಲ್ಲಿ ಅನೇಕರು ಹಬ್ಬದ ಸಮಯದಲ್ಲಿ ಕುಟುಂಬಗಳೊಂದಿಗೆ ಇರಲು ಬಯಸುತ್ತಾರೆ. ಒಂದು ದೇಶವಾಗಿ ದೀರ್ಘವಾದ ಹಬ್ಬ ಆಚರಿಸಲು ಒಂದು ವಾರದ ಅವಧಿಗೆ ಕೆಲಸಕ್ಕೆ ವಿರಾಮ ನೀಡಬಹುದೇ? ಒಂದು ವಾರ ರಜೆ ಸಿಕ್ಕಿದರೆ ನಾವು ದಿನಗಳನ್ನು ಲೆಕ್ಕಿಸದೇ ಕುಟುಂಬದೊಂದಿಗೆ ಸಮಯ ಕಳೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.