ನಮ್ಮ ಇಡೀ ದೇಹ ಆರೋಗ್ಯವಾಗಿ ಇರಬೇಕೆಂದರೆ ಮೆದುಳಿನ ಆರೋಗ್ಯ ಮುಖ್ಯವಾಗಿರುತ್ತದೆ. ಅತಿಯಾದ ಒತ್ತಡ, ನಿದ್ದೆ ಮಾಡದೇ ಇರುವುದು, ಧೂಮಪಾನದಂತಹ ವ್ಯಸನಗಳಿಂದ ಮೆದುಳಿನ ಕಾರ್ಯಚಟುವಟಿಕೆ ಕುಂದಬಹುದು. ಅಲ್ಲದೆ ಮೆದುಳಿಗೆ ಸರಿಯಾದ ರೀತಿಯಲ್ಲಿ ರಕ್ತಸಂಚಾರವಾಗದೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
2013ರಲ್ಲಿ ವರ್ಲ್ಡ್ ಕಾಂಗ್ರೇಸ್ ಆಫ್ ನ್ಯೂರಾಲಜಿಯ ಸಾರ್ವಜನಿಕ ಜಾಗೃತಿ ಮತ್ತು ವಕೀಲರ ಸಮಿತಿಯು ವಿಶ್ವಾದ್ಯಂತ ಹೆಚ್ಚುತ್ತಿರುವ ಮೆದುಳಿನ ಸಮಸ್ಯೆಗಳ ಕಾರಣದಿಂದಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ವಿಶ್ವ ಮೆದುಳಿನ ದಿನವನ್ನು ಆಚರಿಸಲು ಪ್ರಸ್ತಾಪಿಸಿತು. ಇದರ ನಂತರ ವಿಶ್ವ ಮೆದುಳು ದಿನವನ್ನು ಮೊದಲ ಬಾರಿಗೆ 2014 ರಲ್ಲಿ ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಮತ್ತು ಇಂಟರ್ನ್ಯಾಷನಲ್ ಹೆಡ್ಏಕ್ ಸೊಸೈಟಿ ಆಚರಿಸಿತು. ನಂತರ ಪ್ರತಿವರ್ಷ ಜುಲೈ 22 ನೇ ತಾರೀಕಿಗೆ ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ಮೆದುಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಮೆದುಳು ಆರೋಗ್ಯಕರವಾಗಿರಲು ಏನು ತಿನ್ನಬೇಕು:
ಮೀನುಗಳು:
ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ನಮ್ಮ ಮೆದುಳಿನ ಸುಮಾರು 60% ಕೊಬ್ಬಿನಿಂದ ಮಾಡಲ್ಪಟ್ಟಿದ್ದೆ ಮತ್ತು ಅದರಲ್ಲಿ ಅರ್ಧದಷ್ಟು ಕೊಬ್ಬು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಮಾಡಲ್ಪಟ್ಟಿದೆ. ಹೀಗಿರುವಾಗ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಮೆದುಳನ್ನು ಆರೋಗ್ಯರಕವಾಗಿರಿಸಬಹುದು.
ಅರಶಿನ:
ಅರಶಿನವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದೆ. ಅದು ಮೆದುಳಿನ ಜೀವಕೋಶಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಅರಶಿನ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಮೆದುಳಿನ ಕೋಶಗಳಿಗೆ ಹಾನಿಯಾಗುವ ಮೆಮೊರಿ ಸಮಸ್ಯೆಗಳು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಆಹಾರದಲ್ಲಿ ಅರಶಿನ ಸೇರಿಸಬೇಕು.
ಬ್ರೋಕೊಲಿ:
ಬ್ರೋಕೊಲಿ ಅಥವಾ ಕೇಸುಗಡ್ಡೆಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಅಲ್ಲದೆ ಇದರಲ್ಲಿನ ವಿಟಮಿನ್ ಕೆ ಪೋಷಕಾಂಶ
ಮೆದುಳಿನ ಕೋಶಗಳನ್ನು ಆರೋಗ್ಯವಾಗಿಡಲು ಮತ್ತು ರೋಗಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ವಯಸ್ಕರರ ಮೇಲೆ ನಡೆಸಿದ ಅಧ್ಯಯನವೊಂದು ವಿಟಮಿನ್ ಕೆ ಪೋಷಕಾಂಶವನ್ನು ಹೆಚ್ಚು ಸೇವಿಸುವ ಜನರು ಬಲವಾದ ಜ್ಞಾಪಕ ಶಕ್ತಿ ಮತ್ತು ಅರಿವಿನ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ.
ಆಲ್ಕೋಹಾಲ್ ತುಂಬಾ ಹಾನಿಕಾರಕ:
ಆಲ್ಕೋಹಾಲ್ ದೇಹಕ್ಕೆ ಹಾನಿಕಾರಕವಾಗಿದೆ. ಇದು ಒಟ್ಟಾರೆ ದೈಹಿಕ, ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ದೀರ್ಘ ಕಾಲದ ಆಲ್ಕೋಹಾಲ್ ಸೇವನೆಯು ನಿಮ್ಮ ಮೆದುಳಿನ ನರಪ್ರೇಕ್ಷಕ ಸಂವಹನವನ್ನು ಅಡ್ಡಿಪಡಿಸಬಹುದು. ಕಾಲಕ್ರಮೇಣ ಇದರಿಂದ ಜ್ಞಾಪಕ ಶಕ್ತಿಯ ನಷ್ಟ, ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಕಡಿಮೆಯಾಗಬಹುದು.
ಧೂಮಪಾನ:
ಧೂಮಪಾನವು ಮೆದುಳಿನ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಧೂಮಪಾನಿಗಳ ಮೆದುಳಿನ ಸರೆಬ್ರಲ್ ಕಾರ್ಟೆಕ್ಸ್ ಧೂಮಪಾನ ಮಾಡದವರಿಗಿಂತ ತೆಳ್ಳಗಿರುತ್ತದೆ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಸೆರೆಬ್ರಲ್ ಕಾರ್ಟೆಕ್ಸ್ ಮೆದುಳಿನ ಒಂದು ಭಾಗವಾಗಿದ್ದು, ಅದು ಜ್ಞಾಪಕ ಶಕ್ತಿ, ಕಲಿಕೆ ಮತ್ತು ಆಲೋಚನಾ ಕೌಶಲ್ಯಗಳಿಗೆ ಮುಖ್ಯವಾಗಿ ಬೇಕಾಗುತ್ತದೆ. ಇದರಲ್ಲಿ ಉಂಟಾಗುವ ಹಾನಿಯು ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಕಡಿಮೆ ಮಾಡುವುದಲ್ಲದೆ ಮೆದುಳಿಗೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡಬಹುದು.
ಇದಕ್ಕೆ ವೈದ್ಯಕೀಯವಾಗಿ ಚಿಕಿತ್ಸೆ ಇದೆ ಅದರೆ, ಸಮಸ್ಯೆ ಆರಂಭವಾದ ಮೇಲೆ ಪರಿಹಾರ ಹುಡುಕುವುದಕ್ಕಿಂತ ಅನಾರೋಗ್ಯ ಕಾಡದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಯೋಗಾಸನಗಳು ಸಹಾಯ ಮಾಡುತ್ತವೆ.
ಶೀರ್ಸಾಸನ ಆಸನವು ತಲೆ ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ. ಏಕೆಂದರೆ ಈ ಭಂಗಿಯು ನಿಮ್ಮ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಆಸನವು ಮಾನಸಿಕ ಕಾರ್ಯವನ್ನು ಸುಧಾರಿಸಬಲ್ಲದು. ಆದ್ದರಿಂದ ಪ್ರತಿದಿನ ಈ ಆಸನ ಮಾಡುವುದರಿಂದ ಮೆದುಳನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು.
ಮಾಡುವ ವಿಧಾನ
- ಮೊದಲು ಆರಾಮದಲ್ಲಿ ಕುಳಿತುಕೊಳ್ಳಿ. ನಂತರ ಕೈಗಳನ್ನು ಪರಸ್ಪರ ಜೋಡಿಸಿ ತಲೆಯ ಮೇಲೆ ಇಟ್ಟುಕೊಳ್ಳಿ. ನಂತರ ನಿಧಾನವಾಗಿ ಮಂದಕ್ಕೆ ಬಾಗಿ ತಲೆಯನ್ನು ನೆಲಕ್ಕೆ ತಾಗಿಸಿ.
- ಕೈಗಳ ಹಿಡಿತವನ್ನು ಬಿಗಿಗೊಳಿಸಿ ನಿಧಾನವಾಗಿ ಎಡಗಾಲನ್ನು ಮೇಲಕ್ಕೆ ಎತ್ತಿ. ನಂತರ ಬಲಗಾಲನ್ನು ಕೂಡ ಮೇಲಕ್ಕೆ ಎತ್ತಿ, ತಲೆಯ ಮೇಲೆ ನಿಂತು ಕೊಳ್ಳಿ. ಸಾಧ್ಯವಾದಷ್ಟು ಹೊತ್ತು ಅದೇ ಸ್ಥಾನದಲ್ಲಿರಿ.
- ನೆನಪಿಡಿ ಈ ಆಸನವನ್ನು ಮಾಡುವಾಗ ಅಗತ್ಯವಾಗಿ ಸರಿಯಾದ ತರಬೇತಿ ಪಡೆದುಕೊಳ್ಳಿ. ಆರಂಭದಲ್ಲಿ ನೀವು ಗೋಡೆಯ ಸಹಾಯದಿಂದಲೂ ಶೀರ್ಸಾಸನವನ್ನು ಮಾಡಬಹುದಾಗಿದೆ.
- ಹಾಲಾಸನವು ಬೆನ್ನುನೋವಿನಿಂದ ಪರಿಹಾರವನ್ನು ನೀಡುತ್ತದೆ ಮತ್ತು ಸೈನಸ್ ಮತ್ತು ಉಸಿರಾಟದ ವ್ಯವಸ್ಥೆಯಲ್ಲಿ ಕಫ ಅಥವಾ ಲೋಳೆಯನ್ನು ಕಡಿಮೆ ಮಾಡುತ್ತದೆ. ಇದು ಕುತ್ತಿಗೆ ಮತ್ತು ಗಂಟಲಿನ ಪ್ರದೇಶದಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಒತ್ತಡ ಕಡಿಮೆಯಾದಾಗ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ಭುಜಗಳು ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸುವ ಮೂಲಕ ಬೆನ್ನುನೋವು, ನಿದ್ರಾಹೀನತೆ, ತಲೆನೋವು, ಸೈನುಟಿಸ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ.