ಅಮೆರಿಕ: ಅಮೆರಿಕ ದೇಶದ ಅರಿಝೋನಾ ರಾಜ್ಯದ ಮಹಿಳೆಯೊಬ್ಬರನ್ನ ತಮ್ಮ ಗಂಡನನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಮಹಿಳೆಯು ಕಾಫಿಯಲ್ಲಿ ವಿಷ ಬೆರೆಸಿ ಗಂಡನಿಗೆ ಕುಡಿಯಲು ಕೊಟ್ಟಿದ್ದಳು ಎಂದು ತಿಳಿದು ಬಂದಿದೆ. ಒಂದು ತಿಂಗಳಿಂದ ಈ ಮಹಿಳೆ ಗಂಡನಿಗೆ ಕಾಫಿಯಲ್ಲಿ ವಿಷ ಬೆರೆಸಿ ಕೊಡುತ್ತಿದ್ದಳು ಎಂದು ತಿಳಿದು ಬಂದಿದೆ.
ಆಹಾರದಲ್ಲಿ ವಿಷ ಬೆರೆಸಿದ ಆರೋಪ, ಕೊಲೆ ಯತ್ನ ಆರೋಪಗಳ ಅಡಿಯಲ್ಲಿ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ. ಕಳೆದ ಮಾರ್ಚ್ನಿಂದಲೇ ಆರೋಪಿ ಮಹಿಳೆ ಮೆಲೋಡಿ ಫೆಲಿಕಾನೋ ಜಾನ್ಸನ್ ತನ್ನ ಪತಿಗೆ ಕಾಫಿಯಲ್ಲಿ ವಿಷ ಬೆರೆಸಿ ಕೊಡುತ್ತಿದ್ದಳು. ಈಕೆಯ ಪತಿ ರಾಬಿ ಜಾನ್ಸನ್ ಕಾಫಿಯ ರುಚಿ ಬದಲಾಗಿರೋದನ್ನು ಗಮನಿಸಿದ್ದರು. ಕಾಫಿಯ ರುಚಿ ಕೆಟ್ಟಿದೆ ಎಂದು ಹೇಳುತ್ತಿದ್ದರು. ಆದರೆ, ತನಗೆ ಕೊಡುವ ಕಾಫಿಯಲ್ಲಿ ವಿಷ ಬೆರೆಸಲಾಗಿದೆ ಅನ್ನೋದು ರಾಬಿ ಅವರ ಅರಿವಿಗೇ ಬಂದಿರಲಿಲ್ಲ.
ರಾಬಿ ಜಾನ್ಸನ್ ಅವರು ಅಮೆರಿಕ ವಾಯು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಒಂದು ಮಗು ಕೂಡಾ ಇದೆ. ವಿಚ್ಛೇದನಕ್ಕೆ ಮುಂದಾಗಿದ್ದ ಈ ದಂಪತಿ ಅಲ್ಲಿಯವರೆಗೂ ಒಟ್ಟಾಗಿ ಬಾಳುತ್ತಿದ್ದರು. ತಮ್ಮ ಕಾಫಿಯ ರುಚಿ ಬದಲಾದ ಹಿನ್ನೆಲೆಯಲ್ಲಿ ರಾಬಿ ಜಾನ್ಸನ್ ಅವರು ಪರೀಕ್ಷೆಗೆ ಒಳಪಡಿಸಿದ್ದರು. ಆಗ ಕಾಫಿಯಲ್ಲಿ ಭಾರೀ ಪ್ರಮಾಣದ ಕ್ಲೋರಿನ್ ಬೆರೆತಿರೋದು ಪತ್ತೆಯಾಗಿತ್ತು.
ಈ ವಿಚಾರ ಗೊತ್ತಾಗಿದ್ದೇ ತಡ ಎಚ್ಚರ ವಹಿಸಿದ ರಾಬಿ ಜಾನ್ಸನ್, ತಮ್ಮ ಪತ್ನಿ ಕಾಫಿ ಕೊಟ್ಟಾಗ ಅದನ್ನು ಸಂಪೂರ್ಣವಾಗಿ ಕುಡಿದು ಖಾಲಿ ಮಾಡಿದ ರೀತಿ ನಟಿಸುತ್ತಿದ್ದರು. ಬಳಿಕ ತಮ್ಮ ವಾಯು ಪಡೆ ನೆಲೆಗೆ ವಾಪಸ್ ಆದ ಕೂಡಲೇ ಜಾನ್ಸನ್ ಅವರು ಪೊಲೀಸರಿಗೆ ದೂರು ದಾಖಲಿಸಿದರು ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲ, ತಮ್ಮ ಮನೆಯಲ್ಲಿ ಸಾಕಷ್ಟು ಕಡೆ ಹಿಡನ್ ಕ್ಯಾಮರಾ ಅಳವಡಿಸಿದ್ದ ರಾಬಿ ಜಾನ್ಸನ್, ತಮ್ಮ ಪತ್ನಿ ಕಾಫಿಯಲ್ಲಿ ವಿಷ ಬೆರೆಸೋದನ್ನ ಸಾಕ್ಷ್ಯ ಸಮೇತ ಪತ್ತೆ ಮಾಡಿದ್ದಾರೆ. ದೃಶ್ಯಗಳಲ್ಲಿ ಜಾನ್ಸನ್ ಅವರ ಪತ್ನಿ ಕಾಫಿಗೆ ವಿಷ ಬೆರೆಸೋ ಸನ್ನಿವೇಶ ದಾಖಲಾಗಿದೆ ಎಂದು ತಿಳಿದು ಬಂದಿದೆ. ಕ್ಲೋರಿನ್ ರಾಸಾಯನಿಕವನ್ನು ಕಂಟೇನರ್ಗೆ ಹಾಕುತ್ತಿದ್ದ ಮೆಲೋಡಿ ಫೆಲಿಕಾನೋ, ಬಳಿಕ ಅದನ್ನು ಕಾಫಿ ಮೇಕರ್ಗೆ ಸುರಿಯುತ್ತಿದ್ದಳು. ಈ ದೃಶ್ಯವನ್ನು ಸಾಕ್ಷ್ಯದ ರೀತಿ ಪೊಲೀಸರಿಗೆ ನೀಡಲಾಗಿದೆ.