ಬ್ಯೂನಸ್ ಐರಿಸ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಓರ್ವರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ 35 ವರ್ಷದ ಮೆಸ್ಸಿ, ‘ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ. ಆದರೆ ಎಲ್ಲದರಲ್ಲೂ ಚಾಂಪಿಯನ್ ಎಂಬ ಖುಷಿಯಲ್ಲೇ ಈಗ ಆಡುತ್ತಿದ್ದೇನೆ.
ಫುಟ್ಬಾಲ್ನಲ್ಲಿ ಗೆಲುವು ಮಾತ್ರವಲ್ಲ, ನಮ್ಮ ಪಯಣವೂ ಕೂಡಾ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಪಾಠಗಳನ್ನು ಕಲಿಸಿಕೊಟ್ಟಿದೆ. ನಾವು ಏನಾದರೂ ಅಂದುಕೊಂಡಾಗ, ಯಾವುದಕ್ಕಾದರೂ ಪ್ರಯತ್ನಿಸಿ ಸಿಗದೆ ಇರುವ ಕ್ಷಣಗಳೂ ನಮಗೆ ಪಾಠ. ನೀವು ಕನಸು ಕಂಡಿದ್ದನ್ನು ಸಾಧಿಸುವವರೆಗೂ ಪ್ರಯತ್ನ ಬಿಡಬೇಡಿ’ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು 2026ರ ವಿಶ್ವಕಪ್ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದರು.
ಕಳೆದ ವರ್ಷ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫೈನಲ್ನಲ್ಲಿ ಫ್ರಾನ್ಸ್ ಎದುರು ದಿಗ್ವಿಜಯ ಸಾಧಿಸಿತ್ತು. ಈ ಮೂಲಕ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಜೀವಮಾನದ ಕನಸನ್ನು ನನಸಾಗಿಸಿಕೊಂಡಿದ್ದರು.
ಫಿಫಾ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ‘ವಿಶ್ವಕಪ್ ಗೆಲ್ಲುವ ಕನಸು ನನಸಾಗಿದೆ. ಇದಕ್ಕಿಂತ ಇನ್ನೇನು ಬೇಕು. ಕೋಪಾ ಅಮೆರಿಕದ ಜೊತೆಗೆ ವಿಶ್ವಕಪ್ ಕೂಡಾ ಗೆದ್ದಿದ್ದೇನೆ. ದೇವರು ನನಗೆ ಈ ಉಡುಗೊರೆ ನೀಡುತ್ತಾರೆಂದು ಗೊತ್ತಿತ್ತು. ಇದೊಂದು ಅದ್ಭುತ ಕ್ಷಣ. ರಾಷ್ಟ್ರೀಯ ತಂಡದ ಭಾಗವಾಗಿರಲು ತುಂಬಾ ಸಂತೋಷವಾಗುತ್ತಿದೆ’ ಎಂದು ಫೈನಲ್ ಬಳಿಕ ಮೆಸ್ಸಿ ಪ್ರತಿಕ್ರಿಯಿಸಿದ್ದರು