ಬೀಜಿಂಗ್ : ‘ಉಕ್ರೇನ್- ರಷ್ಯಾ ಯುದ್ಧದಲ್ಲಿ ಉಭಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಚೀನಾ ಬಯಸುವುದಿಲ್ಲ’ ಎಂದು ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಲ್ಲಿ ಚೀನಾ, ಸೇನಾ ನೆರವು ನೀಡಬಹುದೆಂಬ ಪಶ್ಚಿಮದ ರಾಷ್ಟ್ರಗಳ ಕಳವಳಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ರಷ್ಯಾವನ್ನು ಆರ್ಥಿಕ ಮತ್ತು ರಾಜಕೀಯವಾಗಿ ಬೆಂಬಲಿಸುತ್ತಿದ್ದರೂ ಈ ಸಂಘರ್ಷದಲ್ಲಿ ಮಾತ್ರ ಚೀನಾ ತಟಸ್ಥ ನಿಲುವು ತಳೆದಿದೆ ಎಂದಿದ್ದಾರೆ.
ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇನಾ ಮತ್ತು ನಾಗರಿಕ ಬಳಕೆಯ ವಸ್ತುಗಳ ರಫ್ತಿನಲ್ಲಿ ಚೀನಾ ವಿವೇಕ ಮತ್ತು ಜವಾಬ್ದಾರಿಯುತ ಮನೋಭಾವ ಅಳವಡಿಸಿಕೊಂಡಿದೆ. ಸಂಘರ್ಷದಲ್ಲಿ ತೊಡಗಿರುವ ಉಭಯ ರಾಷ್ಟ್ರಗಳಿಗೆ ಚೀನಾ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲ. ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಉಭಯ ಬಳಕೆಯ ವಸ್ತುಗಳ ರಫ್ತು ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತದೆ ಎಂದು ತಿಳಿಸಿದರು.