ಅಮೆರಿಕಾದಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇಂದು ಬೆಂಗಳೂರಿಗೆ ಬಂದಿರುವ ನಟ ಶಿವರಾಜ್ ಕುಮಾರ್ ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು.
ಫ್ಲೈಟ್ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಕಾಲ ಸರ್ಜರಿ ನಡೆಯಿತು. ಎರಡನೇ ದಿನದಿಂದಲೇ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ, ಇಂಡಸ್ಟ್ರಿ ಅವರು ಧೈರ್ಯ ತುಂಬಿದರು. ಗೀತನ ಬಗ್ಗೆ ಮಾತಾಡಲ್ಲ. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ಶಿವರಾಜ್ ಕುಮಾರ್ ಹೇಳಿದರು.
ಇಂಡಸ್ಟ್ರಿ ಆರೈಕೆ, ಜನರ ಆರೈಕೆ, ಮಾಧ್ಯಮ ಆರೈಕೆ ಇವತ್ತು ಒಳ್ಳೆಯದಾಗಿದೆ. ಗಂಡಸರಿಗೆ ತಾಯಂದಿರು ತುಂಬಾ ಇರುತ್ತಾರೆ.ಅಮ್ಮ, ಹೆಂಡತಿ ಮಗಳು ಹೀಗೆ. ಈ ಬಾರಿ ನಿವೇದಿತಾ ಕೂಡ ನಮ್ಮ ಜೊತೆ ಇದ್ದಳು. ವಿಶ್ರಾಂತಿ ಹೇಳಿದ್ದಾರೆ. ನಾರ್ಮಲ್ ಕೆಲಸ ಮಾಡುತ್ತೇನೆ. ಮಾರ್ಚ್ ಬಳಿಕ ಆಕ್ಷನ್ ವರ್ಕ್ ಶುರು ಮಾಡುತ್ತೇನೆ ಎಂದು ಹೇಳಿದರು.