ಬೆಲ್ಜಿಯಂ: ಚೀನಾದ ಮಾರುಕಟ್ಟೆಯಲ್ಲಿ ವಿದೇಶೀ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಇಲ್ಲದಿರುವುದು ಬಹಳಷ್ಟು ಪಾಶ್ಚಿಮಾತ್ಯ ದೇಶಗಳಿಗೆ ಇರಿಸುಮುರುಸು ತಂದಿದೆ. ಅದರಲ್ಲೂ ಯೂರೋಪ್ ದೇಶಗಳು ಚೀನಾ ಮಾರುಕಟ್ಟೆ ಪ್ರಾಬಲ್ಯದಿಂದ ಹತಾಶಗೊಂಡಿವೆ. ಈ ವಿಚಾರವು ಮುಂಬರುವ ಚೀನಾ ಮತ್ತು ಐರೋಪ್ಯ ಒಕ್ಕೂಟ ವಾರ್ಷಿಕ ಸಭೆಯಲ್ಲಿ ಚರ್ಚೆಗೆ ಬರಲಿದೆ.
ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ 24ನೇ ಯೂರೋಪಿಯನ್ ಯೂನಿಯನ್ ಚೀನಾ ಮಹಾಸಭೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲ ವೋನ್ ಡೆರ್ ಲೆಯೆನ್, ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಚೀನಾ ಜೊತೆಗಿನ ವ್ಯಾಪಾರ ಅಸಮತೋಲವನ್ನು ಯೂರೋಪ್ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜರ್ಮನಿಯ ಮಾಜಿ ಸಚಿವೆಯೂ ಆದ ಉರ್ಸುಲ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ ದೇಶಗಳು ವ್ಯಾಪಾರ ಸಮರಕ್ಕೆ ಬೀಳುವ ಬದಲು ಸಂಧಾನ ಬಯಸುತ್ತಾರೆ ಎಂದೂ ಯೂರೋಪಿಯನ್ ಕಮಿಷನ್ನ ಅಧ್ಯಕ್ಷೆಯೂ ಆದ ಅವರು ಹೇಳಿದ್ದಾರೆ.
ಫೋರ್ಬ್ಸ್ 2023 ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿರುವ ಉರ್ಸುಲಾ ವಾನ್ ಡರ್, ‘ನಮ್ಮ ಮಾರುಕಟ್ಟೆಯನ್ನು ರಕ್ಷಿಸುವ ಸಾಧನ ನಮ್ಮೊಂದಿಗೆ ಇದೆ. ಆದರೆ, ಸಂಧಾನದ ಮೂಲಕ ಪರಿಹಾರ ಪಡೆಯಲು ಇಚ್ಛಿಸುತ್ತೇವೆ,’ ಎಂದು ಸ್ಪಷ್ಟಪಡಿಸಿದ್ದಾರೆ.
‘ವ್ಯಾಪಾರ ಅಸಮತೋಲನ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ವರ್ಷದಲ್ಲಿ ಈ ಅಸಮತೋಲನ ಎರಡು ಪಟ್ಟು ಹೆಚ್ಚಾಗಿ ಈಗ 400 ಬಿಲಿಯನ್ ಯೂರೋ ತಲುಪಿದೆ… ಈ ವ್ಯಾಪಾರ ಸಂಬಂಧದಲ್ಲಿ ದೀರ್ಘಕಾಲ ಅಸಮತೋಲನವನ್ನು ಐರೋಪ್ಯ ನಾಯಕರು ಒಪ್ಪುವುದಿಲ್ಲ’ ಎಂದು ಉರ್ಸುಲಾ ಎಚ್ಚರಿಕೆ ನೀಡಿದ್ದಾರೆ.